

ಬೆಂಗಳೂರು: ಡಿಸ್ಟೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಲಾಸ್ ಏಂಜಲೀಸ್ನ ಗಿಟಾರ್ ವಾದಕ ಜೋಸ್ಫ್ ಡಿಸೋಜಾಗೆ ನಗರದ ಮಹಾವೀರ ಜೈನ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಚಿಕಿತ್ಸೆ ವೇಳೆ ಕಲಾವಿದ ಗಿಟಾರ್ ನುಡಿಸುತ್ತಿದ್ದರು ಎಂಬುದು ವಿಶೇಷ.
ಈ ಕಾಯಿಲೆಗೆ ಚಿಕಿತ್ಸೆ ಸಿಗುವುದು ಅತ್ಯಪರೂಪ. ಯೂಟ್ಯೂಬ್ ವಿಡಿಯೋದಲ್ಲಿ ಜೈನ್ ಆಸ್ಪತ್ರೆ ವೈದ್ಯರ ಸಾಧನೆ ಗಮನಿಸಿದ ಜೋಸ್ಫ್ ಬೆಂಗಳೂರಿಗೆ ಬಂದು ಆಸ್ಪತ್ರೆಗೆ ದಾಖಲಾಗಿದ್ದರು. ನ್ಯೂರೋ ಸರ್ಜನ್ ಡಾ.ಶರಣ್ ಶ್ರೀನಿವಾಸನ್, ಹಿರಿಯ ನ್ಯೂರೋ ಸರ್ಜನ್ ಡಾ.ಸಿ.ಸಿ. ಸಂಜೀವ್ ತಂಡ ಶಸ್ತ್ರಚಿಕಿತ್ಸೆ ನಡೆಸಿತು.
ಬಳಿಕ ಮಾತನಾಡಿದ ಜೋಸ್ಫ್ ಡಿಸೋಜಾ, ಸಂಗೀತ ನನ್ನ ಜೀವನವಾಗಿದೆ. 6ನೇ ವಯಸ್ಸಿಗೆ ಗಿಟಾರ್ ಕಲಿತೆ. 20ನೇ ವಯಸ್ಸಿಗೆ ಖ್ಯಾತ ಬ್ಯಾಂಡ್ ಒಂದಕ್ಕೆ ಗಿಟಾರ್ ನುಡಿಸಿದ್ದೆ. 2004ರವರೆಗೆ ಎಲ್ಲವೂ ಚೆನ್ನಾಗಿತ್ತು. ನಂತರ, ಗಿಟಾರ್ ನುಡಿಸುವ ವೇಳೆ ಸಾಕಷ್ಟು ಸಮಸ್ಯೆ ಎದುರಿಸಿದ್ದೆ. ಎಡಗೈ ಮಧ್ಯದ ಬೆರಳು, ಕಿರು ಬೆರಳಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ದಿನದಿಂದ ಈ ಸಮಸ್ಯೆ ಜಟಿಲವಾಯಿತು. ಲಾಸ್ ಏಂಜೆಲಿಸ್ನ ವೈದ್ಯರ ಬಳಿ ಪರೀಸಿಕೊಂಡಿದ್ದೆ. ಈ ವೇಳೆ ಡಿಸ್ಟೋನಿಯಾ ಕಾಯಿಲೆ ದೃಢವಾಗಿತ್ತು. ಇದಕ್ಕೆ ಸೂಕ್ತ ಚಿಕಿತ್ಸೆ ಇಲ್ಲವೆಂದು ವೈದ್ಯರು ಹೇಳಿದ್ದರು. ಅಂತಿಮವಾಗಿ ಮಹಾವೀರ ಜೈನ್ ಆಸ್ಪತ್ರೆ ವೈದ್ಯರ ಸಹಕಾರದಿಂದಾಗಿ ಗುಣಮುಖವಾದೆ ಎಂದು ಹರ್ಷ ವ್ಯಕ್ತಪಡಿಸಿದರು.