ಪೊಲೀಸ್ ಸರ್ಪಗಾವಲಿನಲ್ಲಿ ಪುರಾತತ್ವ ಇಲಾಖೆ ಸರ್ವೇ

image_6483441
Published on

ನಾಗಮಂಗಲ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದ ಸುತ್ತಲಿನ 300 ಮೀಟರ್ ವ್ಯಾಪ್ತಿಯಲ್ಲಿನ ಕಟ್ಟಡಗಳನ್ನು ಪುರಾತತ್ವ ಇಲಾಖೆ ಅಧಿಕಾರಿಗಳು ಪೊಲೀಸ್ ಸರ್ಪಗಾವಲಿನಲ್ಲಿ ಗುರುವಾರ ಸರ್ವೇ ನಡೆಸಿದರು.


ಪುರಸಭೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಜಂಟಿ ಸರ್ವೇ ನಡೆಸಿದ ಪುರಾತತ್ವ ಇಲಾಖೆ ಸರ್ವೇ ಅಧಿಕಾರಿಗಳು ಮೊದಲಿಗೆ 100 ಮೀಟರ್ ವ್ಯಾಪ್ತಿಯೊಳಗಿರುವ ಕಟ್ಟಡಗಳ ಸರ್ವೇ ನಡೆಸಿದರು.


ನಂತರ ದೇವಾಲಯದಿಂದ 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಕಟ್ಟಡಗಳು, ಬಳಿಕ 300 ಮೀಟರ್ ವ್ಯಾಪ್ತಿಯೊಳಗೆ ಬರುವಂತಹ ಕಟ್ಟಡಗಳನ್ನು ಗುರುತಿಸಿ ಸರ್ವೇ ನಡೆಸಲಾಗುವುದು. ನ್ಯಾಯಾಲಯದಲ್ಲಿ ಪ್ರಕರಣವಿರುವುದರಿಂದ ಸರ್ವೇ ನಡೆಸಲಾಗುತ್ತಿದೆ. ದೇವಾಲಯದ ಸುತ್ತಲ 300 ಮೀಟರ್ ವ್ಯಾಪ್ತಿಯೊಳಗಿನ ಎಲ್ಲ ಕಟ್ಟಡಗಳನ್ನು ಸರ್ವೇ ನಡೆಸುವ ಜತೆಗೆ ಪ್ರಸ್ತುತ ಯಾವ ಸ್ಥಿತಿಯಲ್ಲಿವೆ ಎಂಬ ದಾಖಲೆಯನ್ನು ಫೋಟೋ ಸಹಿತ ಸಿದ್ಧಪಡಿಸಲಾಗುತ್ತಿದೆ ಎಂದು ಪುರಾತತ್ವ ಇಲಾಖೆಯ ಸರ್ವೇ ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದರು.


ಮುಂಜಾಗ್ರತಾ ಕ್ರಮವಾಗಿ ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್ ನೇತೃತ್ವದಲ್ಲಿ 4 ಇನ್ಸ್‌ಪೆಕ್ಟರ್, 5 ಪಿಎಎಸ್‌ಐಗಳು ಸೇರಿದಂತೆ 2 ಡಿಆರ್ ತುಕಡಿ ಹಾಗೂ 55 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.


2 ವರ್ಷಗಳ ಹಿಂದೆಯೇ ಹೈಕೋರ್ಟ್ ಆದೇಶದಂತೆ ಪುರಾತತ್ವ ಇಲಾಖೆ ಸರ್ವೇ ನಡೆಸಬೇಕಿತ್ತು. ಕರೊನಾ ಕಾರಣದಿಂದ ಸ್ಥಗಿತಗೊಳಿಸಲಾಗಿತ್ತು. ಪಟ್ಟಣದ ನಿವಾಸಿಗಳು ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಮಾಹಿತಿ ನೀಡಿದರು.


ಪುರಸಭೆ ಸದಸ್ಯ ತಿಮ್ಮಪ್ಪ ಮಾತನಾಡಿ, ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ವಿಷಯವಾಗಿ ಪುರಾತತ್ತ್ವ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಬೇಕಿದೆ. ಪದೇ ಪದೆ ಈ ರೀತಿ ಸರ್ವೇ ಕೈಗೊಳ್ಳುವುದರಿಂದ ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net