

ಕಲಘಟಗಿ: ತಾಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮದ ಹದ್ದಿನಲ್ಲಿರುವ 84 ಎಕರೆ ಅತಿಕ್ರಮಣವಾದ ಹುಲ್ಲುಗಾವಲು ಪ್ರದೇಶವನ್ನು ಕೂಡಲೇ ಸಂರಕ್ಷಣೆ ಮಾಡಿ ಜಾನುವಾರು ಉಳಿಸಿ ಎಂದು ಗ್ರಾಮಸ್ಥರು ತಹಸೀಲ್ದಾರ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಸರಹದ್ದಿನಲ್ಲಿರುವ 84 ಎಕರೆ ಜಮೀನಿನಲ್ಲಿ 2 ಎಕರೆ ಸ್ಮಶಾನಕ್ಕೆ ಹಾಗೂ 10 ಗುಂಟೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಉಪಯೋಗಿಸಲಾಗಿದೆ. ಉಳಿದ ಹುಲ್ಲುಗಾವಲು ಭೂಮಿ ಜಾನುವಾರಗಳಿಗೆ ಮೇಯಿಸಲು ಬಿಡಬೇಕು ಎಂದು ಅಗ್ರಹಿಸಿದರು.
ಹಲವು ಬಾರಿ ತಹಸೀಲ್ದಾರ್‌ಗೆ, ಜಿಲ್ಲಾಧಿಕಾರಿಗೆ ಹಾಗೂ ಪೊಲೀಸ್ ಇಲಾಖೆಗೆ ಹುಲ್ಲುಗಾವಲು ಭೂಮಿ ಉಳಿಸಿ ಎಂದು ಮನವಿ ಸಲ್ಲಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಹುಲ್ಲುಗಾವಲು ಪ್ರದೇಶ ಎಂದು ನಾಮಫಲಕ ಅಂಟಿಸಿದರೂ ಅದನ್ನು ಕಿತ್ತು ಹಾಕಿ ಭೂಮಿ ಕಬಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಗ್ರಾಮದಲ್ಲಿ 1 ಸಾವಿರಕ್ಕೂ ಹೆಚ್ಚು ಜಾನುವಾರಗಳಿದ್ದು, ಅವುಗಳನ್ನು ಮೇಯಿಸಲು ಇದ್ದ 84 ಎಕರೆ ಭೂಮಿಯನ್ನು ಸಂಪೂರ್ಣ ಉಳುಮೆ ಮಾಡಿದ್ದಾರೆ. ಆದರಿಂದ ನಮ್ಮ ಹಸುಗಳಿಗೆ ಆಹಾರದ ಸಮಸ್ಯೆ ಎದುರಾಗಿದೆ ಎಂದರು.
ಅಕ್ರಮ ಜಮೀನನ್ನು ಸಕ್ರಮ ಮಾಡಿಕೊಳ್ಳಲು ಹಲವರು ಅರ್ಜಿ ಸಲ್ಲಿಸಿದ್ದಾರೆ. ಪರಿಶೀಲನೆ ಮಾಡಿ ಜನರ ಅಹವಾಲು ಸ್ವೀಕರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ ಯಲ್ಲಪ್ಪ ಗೊಣೇಣ್ಣವರ ತಿಳಿಸಿದರು.
ಗ್ರಾಪಂ ಅಧ್ಯಕ್ಷ ಈರಣ್ಣ ಹೊನ್ನಳ್ಳಿ, ಸದಸ್ಯ ಸಂತೋಷಕುಮಾರ ಹೊಸಮನಿ, ಗಂಗನಗೌಡ ನಡುವಿನಮನಿ, ಸಂಗಪ್ಪ ಅಂಬಿಗೇರ, ರಮೇಶ ಬೆಣ್ಣಿ, ಉಳವನಗೌಡ ಮುರಳ್ಳಿ, ಗಂಗಯ್ಯಸ್ವಾಮಿ ಹಿರೇಮಠ, ರುದ್ರಗೌಡ್ರ ದೊಡ್ಡಗೌಡ್ರ, ಮಹದೇವಗೌಡ ನಡುವಿನಮನಿ, ಮಂಜುನಾಥ ಬೆಣ್ಣಿ, ಮಂಜುನಾಥ ಶೀಲವಂತರ, ಬಸನಗೌಡ ಪಾಟೀಲ, ಭರಮಪ್ಪ ಕುಂದಗೋಳ, ಮುತ್ತಪ್ಪ ಪೀರಪ್ಪನವರ, ಮುತ್ತಣ್ಣ ಮುರಳ್ಳಿ, ರಾಮನಗೌಡ ಸುಟಗೌಡ್ರ ಇದ್ದರು.