ಶಾಲಾ ಅಭಿವೃದ್ಧಿಗೆ ನೆರವು ನೀಡಿ

24 gkp 01
Published on

ಗೋಣಿಕೊಪ್ಪ: ಪೊನ್ನಂಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ 8ನೇ ವಾರ್ಷಿಕ ಸಭೆಯನ್ನು ಶಾಲೆಯ ಶತಮಾನೋತ್ಸವ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು.


ಸಂಘದ ಅಧ್ಯಕ್ಷ ಮೂಕಳೇರ ಕುಶಾಲಪ್ಪ ಮಾತನಾಡಿ, ಶತಮಾನೋತ್ಸವ ಹಿನ್ನೆಲೆಯಲ್ಲಿ ಶಾಲೆಗೆ ಪೂರಕವಾದ ತೆರೆದ ಸಭಾಂಗಣವನ್ನು ನಿರ್ವಹಿಸಿಕೊಡಲಾಗಿದೆ. ವಿದ್ಯಾರ್ಥಿಗಳಿಗೂ ಪ್ರೋತ್ಸಾಹ ನೀಡಲಾಗುತ್ತಿದೆ. ಸಂಘವು 300ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ. ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಸದಸ್ಯತ್ವವನ್ನು ಪಡೆಯುವ ಮೂಲಕ ಶಾಲಾ ಅಭಿವೃದ್ಧಿಗೆ ನೆರವು ನೀಡಬೇಕು ಎಂದು ಮನವಿ ಮಾಡಿದರು.


ಕೋಳೆರ ಗೋಕುಲ್ ದತ್ತಿ ನಿಧಿ ಬಹುಮಾನ 20 ಸಾವಿರ ರೂ.ಗಳನ್ನು ಎಚ್.ಕೆ.ಪ್ರಭು ಹಾಗೂ ಮಂಜುಳಾ ದಂಪತಿ ಪುತ್ರಿ ಸ್ನೇಹಾಗೆ ಇದೇ ಸಂದರ್ಭ ನೀಡಲಾಯಿತು. ಇದೇ ಹಣದಲ್ಲಿ 10 ಸಾವಿರ ರೂ.ಗಳನ್ನು ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿನಿಗೆ ಪ್ರೋತ್ಸಾಹಧನ ನೀಡುವಂತೆ ದಂಪತಿ ದತ್ತಿ ನಿಧಿ ಸ್ಥಾಪಿಸಿದರು.


ವಿದ್ಯಾರ್ಥಿಗಳಾದ ಜೆ.ಎ.ದೀಪಿಕಾ, ಜೆ.ಕೆ.ಗಣೇಶ್‌ಗೆ ನಗದು ಬಹುಮಾನ ನೀಡಲಾಯಿತು. ಪುಣೆಯಲ್ಲಿ ನಡೆದ ವಯಸ್ಕರ ಓಟದಲ್ಲಿ ತೃತೀಯ ಸ್ಥಾನ ಪಡೆದ ಪೆಮ್ಮಂಡ ಅಪ್ಪಯ್ಯ ಅವರನ್ನು ಸನ್ಮಾನಿಸಲಾಯಿತು. ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಕಳೆದ ಸಾಲಿನ ವರದಿಯನ್ನು ಮಂಡಿಸಿದರು. ಸಂಘದ ನಿರ್ದೇಶಕಿ ರೋಸಿ ಆಡಳಿತ ಮಂಡಳಿ ವರದಿಯನ್ನು, ದಾದು ಪೂವಯ್ಯ ಲೆಕ್ಕಪತ್ರ ಮಂಡಿಸಿದರು.


ಅಮ್ಮತ್ತಿರ ವಾಸುವರ್ಮ, ಕೋಳೆರ ದಯಾ ಚಂಗಪ್ಪ, ಚೇಂದಿರ ನಿರ್ಮಲಾ ಬೋಪಣ್ಣ, ರೇಖಾ ಶ್ರೀಧರ್, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಬಾನಂಡ ರಮೇಶ್, ಸ್ಥಾಪಕ ಅಧ್ಯಕ್ಷ ಚಂಗಪ್ಪ, ಮುಖ್ಯ ಶಿಕ್ಷಕಿ ಝನ್ಸಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net