

ಬೇಲೂರು: ನೂರಾರು ವರ್ಷಗಳ ಇತಿಹಾಸವಿರುವ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಜಾತ್ರಾ ಮಹೋತ್ಸವವು ಯಾವುದೇ ಗೊಂದಲವಿಲ್ಲದಂತೆ ಅದ್ದೂರಿಯಾಗಿ ನಡೆಸಲು ಎಲ್ಲರ ಸಹಕಾರ ಅಗತ್ಯ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ಚನ್ನಕೇಶವಸ್ವಾಮಿ ದಾಸೋಹ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿನ ದೇವಸ್ಥಾನಕ್ಕೆ 900 ವರ್ಷಗಳ ಇತಿಹಾಸವಿದೆ. 2023ರ ಏಪ್ರಿಲ್ 12ರಂದು ದೇಗುಲ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿತ್ತು. ಈ ಬಾರಿ ಏಪ್ರಿಲ್ 12ರಿಂದಲೇ ಜಾತ್ರಾ ಮಹೋತ್ಸವದ ಉತ್ಸವಗಳು ಜರುಗಲಿರುವುದು ಸಂತೋಷ ತಂದಿದೆ. ಹಿಂದಿನ ಕಾಲದ ಪರಂಪರೆಯನ್ನು ನಾವೆಲ್ಲರೂ ಮುಂದುವರಿಸಿಕೊಂಡು ಹೋಗಬೇಕಿದೆ. ಸಂಪ್ರದಾಯವನ್ನು ಯಾರೂ ಮೀರಬಾರದು ಎಂದರು.
ಏಪ್ರಿಲ್ 12 ರಿಂದ 24ರವರೆಗೆ ಜಾತ್ರಾ ಮಹೋತ್ಸವ ನಡೆಯುತ್ತದೆ. ರಥೋತ್ಸವದ ದಿನದಂದು ವಾಹನ ದಟ್ಟಣೆಯಾಗುವ ಸಾಧ್ಯತೆ ಇದ್ದು ನಿಯಂತ್ರಿಸಲು ಪೊಲೀಸ್ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು. ದೇವರ ಉತ್ಸವ ಸಾಗುವ ಎಂಟು ಬೀದಿಗಳಲ್ಲಿ ಅಡ್ಡೆಗಾರರಿಗೆ ಮತ್ತು ದೇವರ ಉತ್ಸವದ ಸಂದರ್ಭ ಆ ಬೀದಿಗಳಲ್ಲಿ ಮನೆ ಮಾಲೀಕರು ವಾಹನಗಳನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಈ ಬಗ್ಗೆ ಪೊಲೀಸರು ಅವರೊಂದಿಗೆ ಚರ್ಚಿಸಿ ಸಹಕರಿಸಬೇಕು ಎಂದು ಸಲಹೆ ನೀಡಿದರು.
ಪಟ್ಟಣವನ್ನು ಸ್ವಚ್ಛವಾಗಿಡಲು ಪುರಸಭೆ ಮುಂದಾಗಬೇಕು. ವಿಷ್ಣು ಸಮುದ್ರ ಕಲ್ಯಾಣಿ ಸುತ್ತಮುತ್ತ ಹಾಗೂ ಉತ್ಸವ ತೆರಳುವ ರಸ್ತೆಯ ಇಕ್ಕೆಲಗಳಲ್ಲೂ ಸ್ವಚ್ಛತೆ ಕಾಪಾಡಬೇಕು. ಸೆಸ್ಕ್ ಸಿಬ್ಬಂದಿ ವಿದ್ಯುತ್‌ಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕೆಎಸ್‌ಆರ್‌ಟಿಸಿಯಿಂದ ಬಸ್ ವ್ಯವಸ್ಥೆ ಮಾಡಬೇಕು. ವಿವಿಧ ಇಲಾಖೆ ಅಧಿಕಾರಿಗಳು ತಮಗೆ ವಹಿಸಿದ ಎಲ್ಲ ಕೆಲಸ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಮನವಿ ಮಾಡಿದರು.
ಅಡ್ಡೆಗಾರ ಶ್ರೀನಿವಾಸ್ ಮಾತನಾಡಿ, ಉತ್ಸವದ ಸಂದರ್ಭದಲ್ಲಿ ಬೀದಿಗಳಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಅಡ್ಡೆಗಾರರಿಗೆ ತೊಂದರೆಯಾಗುತ್ತಿದೆ. ವಾಹನಗಳನ್ನು ತೆರವುಗೊಳಿಸಿದರೆ ಸರಾಗವಾಗಿ ಉತ್ಸವ ನಡೆಯಲು ಸಹಕಾರಿಯಾಗುತ್ತದೆ ಎಂದರು.
ದೇಗುಲ ವ್ಯವಸ್ಥಾಪನ ಮಂಡಳಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ತಹಸೀಲ್ದಾರ್ ಎಂ.ಮಮತಾ, ಪುರಸಭೆ ಸದಸ್ಯೆ ದಿವ್ಯಾ ಗಿರೀಶ್, ತಾಪಂ ಇಒ ಸತೀಶ್, ಸದಸ್ಯರಾದ ರವೀಂದ್ರ, ರವಿಶಂಕರ, ಪ್ರಮೋದ್, ಸುಧಾ, ವಿಜಯಲಕ್ಷ್ಮೀ, ಅರ್ಚಕರಾದ ಶ್ರೀನಿವಾಸ್ ಭಟ್ಟರ್, ನರಸಿಂಹಪ್ರಿಯ ಭಟ್ಟರ್, ಪೊಲೀಸ್ ಇನ್‌ಸ್ಪೆಕ್ಟರ್ ಸುಬ್ರಹ್ಮಣ್ಯ, ಸರ್ಕಲ್ ಇನ್‌ಸ್ಪೆಕ್ಟರ್ ಜಯರಾಮ್, ಸಬ್‌ಇನ್‌ಸ್ಪೆಕ್ಟರ್ ಪ್ರಮೋದ್, ವಲಯ ಅರಣ್ಯಾಧಿಕಾರಿ ವಿನಯ್ ಕುಮಾರ್, ದೇಗುಲ ಇಒ ಯೋಗೀಶ್ ಇದ್ದರು.