

ಕೆ.ಆರ್.ಪೇಟೆ: ಮುಂಬರುವ ಎಂಡಿಸಿಸಿ ಬ್ಯಾಂಕ್ ಮತ್ತು ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಜೆಡಿಎಸ್‌ನ ಪ್ರತಿಯೊಬ್ಬ ಕಾರ್ಯಕರ್ತ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಎಂಡಿಸಿಸಿ ಬ್ಯಾಂಕ್ ಮತ್ತು ಟಿಎಪಿಸಿಎಂಎಸ್ ಚುನಾವಣಾ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಘಟಾನುಘಟಿ ನಾಯಕರು ಜೆಡಿಎಸ್ ಪಕ್ಷ ಬಿಟ್ಟು ಹೋದರೂ ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಸದೃಢವಾಗಿದೆ. ಕಾರ್ಯಕರ್ತರು ಮುಂದಿನ ಎಲ್ಲ ಚುನಾವಣೆಗಳಲ್ಲಿಯೂ ತಮ್ಮ ಸಾಮರ್ಥ್ಯ ತೋರಿಸಲು ಸಿದ್ಧರಿದ್ದಾರೆ. ಟಿಎಪಿಸಿಎಂಎಸ್ ಹಾಗೂ ಎಂಡಿಸಿಸಿ ಬ್ಯಾಂಕ್ ಚುನಾವಣೆಗಳಲ್ಲಿ ಗೆಲುವು ಸಾಧಿಸಲಿದ್ದೇವೆ. ಕಾಂಗ್ರೆಸ್ ವಾಮಮಾರ್ಗದ ಮೂಲಕ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಮನಸ್ಥಿತಿಯಲ್ಲಿದೆ. ನಾವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯಶೀಲರಾಗಲು ಕೆಲಸ ಮಾಡಬೇಕು ಎಂದರು.
ಈ ವೇಳೆ ಎಂಡಿಸಿಸಿ ಬ್ಯಾಂಕ್ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಜೈನಹಳ್ಳಿ ಸೊಸೈಟಿ ನಿರ್ದೇಶಕ ಸಿಂಗನಹಳ್ಳಿ ಧರಣೇಶ್ ಅವರನ್ನು ಆಯ್ಕೆ ಮಾಡಲಾಯಿತು.
ತಾಲೂಕು ಮಹಿಳಾ ಜೆಡಿಎಸ್ ಘಟಕದ ಅಧ್ಯಕ್ಷೆ ರೇಖಾ ಲೋಕೇಶ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ತಾಪಂ ಮಾಜಿ ಸದಸ್ಯರಾದ ಹುಲ್ಲೇಗೌಡ, ಮಲ್ಲೇನಹಳ್ಳಿ ಮೋಹನ್, ಟಿಎಪಿಸಿಎಂಎಸ್ ನಿರ್ದೇಶಕರಾದ ಶೀಳನೆರೆ ಮೋಹನ್, ಬಲದೇವ್, ದಿನೇಶ್, ಮುಖಂಡರಾದ ಬೇಲದಕೆರೆ ನಂಜಪ್ಪ ಇತರರು ಇದ್ದರು.