

ಪಾಂಡವಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ಹಾಗೂ ಜನವಿರೋಧಿ ನೀತಿಗಳ ಖಂಡಿಸಿ ಜೆಸಿಟಿಯು ಸಂಘಟನೆ ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ಪಟ್ಟಣದಲ್ಲಿ ರೈತಸಂಘ, ಸಿಐಟಿಯು ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಪಾಂಡವ ಕ್ರೀಡಾಂಗಣದ ಬಳಿಯಿಂದ ಹೊರಟ ಪ್ರತಿಭಟನಾ ರ‌್ಯಾಲಿಯೂ ಪಟ್ಟಣದ ವಿವಿಧ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮಂಡ್ಯ ಸರ್ಕಲ್, ಐದು ದೀಪವೃತ್ತದಲ್ಲಿ ಶ್ರೀರಂಗಪಟ್ಟಣ-ಜೇವರ್ಗಿ ಹೆದ್ದಾರಿ ತಡೆದು ಮಾನವ ಸರಪಳಿ ನಿರ್ಮಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಬಳಿಕ ಐದು ದೀಪ ವೃತ್ತದಲ್ಲಿಯೇ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದು ಬಿಡುಗಡೆ ಮಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಕಾರ್ಮಿಕ ಹಾಗೂ ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯುಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು. ಹೊರಗುತ್ತಿಗೆ ನೌಕರರ ಉದ್ಯೋಗವನ್ನು ಕಾಯಂಗೊಳಿಸಬೇಕು, ಎಲ್ಲ ಸಂಘಟಿತ, ಅಸಂಘಟಿತ, ಗುತ್ತಿಗೆ ಕಾರ್ಮಿಕರು, ಸ್ಕೀಂ ನೌಕರರಿಗೆ ರಾಷ್ಟ್ರ, ರಾಜ್ಯ ವ್ಯಾಪಿ ನೌಕರರಿಗೂ ಕನಿಷ್ಠ 36 ಸಾವಿರ ವೇತನ ನಿಗದಿಪಡಿಸಬೇಕು, ಪೆಟ್ರೋಲ್, ಡೀಸೆಲ್, ದಿನಬಳಕೆ ವಸ್ತುಗಳ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು, ಹಳೇ ಪಿಂಚಣಿ ಪದ್ಧತಿಯನ್ನು ಜಾರಿಗೊಳಿಸಬೇಕು, ಉದ್ಯೋಗದ ಹಕ್ಕನ್ನು ಮೂಲ ಹಕ್ಕನ್ನಾಗಿಸಬೇಕು. ವಿದ್ಯುತ್ ತಿದ್ದುಪಡಿ ಮಸೂದೆ-2022 ವಾಪಸ್ ಪಡೆಯಬೇಕು, ವಿದ್ಯುತ್ ಖಾಸಗೀಕರಣ ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಬೇಕು, ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ, ವಿದ್ಯುತ್ ಬಿಲ್ ಮೇಲಿನ ಸಬ್ಸಿಡಿ ಹೆಚ್ಚಳ ಮಾಡಬೇಕು, ಸಮಗ್ರ ಬೆಳೆ ಸಾಲ, ಬೆಳೆ ವಿಮೆ ಯೋಜನೆಯನ್ನು ಜಾರಿಗೊಳಿಸಬೇಕು ಸೇರಿದಂತೆ ಸುಮಾರು 29 ಬೇಡಿಕೆಯನ್ನು ಜಾರಿಗೊಳಿಸಬೇಕು ಎಂದು ಸರ್ಕಾರಗಳಿಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ವಿಜಯ್‌ಕುಮಾರ್, ಕೆ.ಟಿ.ಗೋವಿಂದೇಗೌಡ, ಸಿಐಟಿಯು ಸಂಘಟನೆಯ ಶಿವಕುಮಾರ್, ಡಿ.ಕೆ.ಅಂಕಯ್ಯ, ರೈತ ಮುಖಂಡ ಚಿಕ್ಕಾಡೆ ರಘು, ಎಣ್ಣೆಹೊಳೆಕೊಪ್ಪಲು ಮಂಜುನಾಥ್, ರಘು ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.