

ಮದ್ದೂರು: ನಮ್ಮ ಸರ್ಕಾರದ ಸಾಧನೆಗಳನ್ನು ಗುರುತಿಸಿ ಈ ಬಾರಿಯ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮರಿತಿಬ್ಬೇಗೌಡ ಅವರನ್ನು ಬೆಂಬಲಿಸಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು.
ಪಟ್ಟಣದಲ್ಲಿ ಗುರುವಾರ ವಿವಿಧ ಶಾಲಾ- ಕಾಲೇಜುಗಳಿಗೆ ಭೇಟಿ ನೀಡಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ನಡೆಸಿ ನಂತರ ಮಾತನಾಡಿದರು. ಮರಿತಿಬ್ಬೇಗೌಡ ಅವರು ಅನುಭವಿ ರಾಜಕಾರಣಿಯಾಗಿದ್ದು, ಶಿಕ್ಷಕರ ಸಮಸ್ಯೆಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದು ಅವರನ್ನು ಮತ್ತೊಮ್ಮೆ ಶಾಸಕರನ್ನಾಗಿ ಆಯ್ಕೆ ಮಾಡಿದರೆ ಶಿಕ್ಷಕರಿಗೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ ಎಂದರು.
ಶಿಕ್ಷಕರು ಬುದ್ಧಿವಂತರಿದ್ದಾರೆ. ಯಾರು ಏನು ಕೆಲಸ ಮಾಡುತ್ತಾರೆ ಎಂದು ಅವರಿಗೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಈ ಬಾರಿಯ ಚುನಾವಣೆಯಲ್ಲಿ ಮರಿತಿಬ್ಬೇಗೌಡ ಅವರ ಕೈ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮರಿತಿಬ್ಬೇಗೌಡ ಅವರು 24 ವರ್ಷ ಸುದೀರ್ಘ ರಾಜಕಾರಣ ನಡೆಸಿದ್ದಾರೆ. ಅವರಿಗೆ ಕ್ಷೇತ್ರದ ಸಮಸ್ಯೆಯ ಅರಿವಿದೆ. ವಿಧಾನ ಪರಿಷತ್ತಿನಲ್ಲಿ ರೈತ ಹಾಗೂ ಬಡವರ ಪರವಾಗಿ ಧ್ವನಿ ಎತ್ತಿದ್ದಾರೆ ಎಂದರು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ. ದೇಶದಲ್ಲಿ ನುಡಿದಂತೆ ನಡೆದ ಸರ್ಕಾರವೆಂದರೆ ಅದು ರಾಜ್ಯದ ಕಾಂಗ್ರೆಸ್ ಸರ್ಕಾರವಾಗಿದೆ. ಅನುಭವಿ ಹಾಗೂ ಶಿಕ್ಷಣದ ಕ್ಷೇತ್ರದ ಬಗ್ಗೆ ಅಪಾರವಾದ ಜ್ಞಾನವಿರುವ ಮರಿತಿಬ್ಬೇಗೌಡ ಅವರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಲಿಂಗಯ್ಯ, ಪುರಸಭಾ ಮಾಜಿ ಅಧ್ಯಕ್ಷ ಎಂ.ಪಿ.ಅಮರ್‌ಬಾಬು, ಮುಖಂಡ ಅಭಿಷೇಕ್, ವಿಜಯ್‌ಕುಮಾರ್ ಇದ್ದರು.