ಮುಂಡರಗಿ, ಬರದೂರ ಭಾಗದಲ್ಲಿ ತ್ರೀಫೇಸ್ ವಿದ್ಯುತ್ ಪೂರೈಸಿ

19MDG1 PRATIBHATANEEEEEEEEEEEEEEEEEEEEEEEEEEE
Published on

ಮುಂಡರಗಿ: ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ತ್ರಿಫೇಸ್ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿ ಪಟ್ಟಣದ ಹಾಗೂ ಬರದೂರು ಭಾಗದ ಕೆಲ ರೈತರು ಸೋಮವಾರ ಸ್ಥಳೀಯ ವಿದ್ಯುತ್ ಪ್ರಸರಣ ಘಟಕದ ಮುಂದೆ ಪ್ರತಿಭಟನೆ ನಡೆಸಿದರು.


ಹೆಸ್ಕಾಂ ಅಧಿಕಾರಿಗಳು ಈಗ ರೈತರ ಪಂಪ್‌ಸೆಟ್‌ಗಳಿಗೆ ಹಗಲು ಆರು ತಾಸು ಹಾಗೂ ರಾತ್ರಿ ಒಂದು ತಾಸು ತ್ರಿಫೇಸ್ ವಿದ್ಯುತ್ ಪೂರೈಸುತ್ತಿದ್ದಾರೆ. ಸೋಮವಾರ ಬೆಳಗ್ಗೆ 6 ಗಂಟೆಗೆ ಪೂರೈಸುವಂತ ವಿದ್ಯುತ್ ಅನ್ನು ಏಕಾಏಕಿ ಸ್ಥಗಿತಗೊಳಿಸಿ ಮಧ್ಯಾಹ್ನ 12ಗಂಟೆಯಿಂದ ಪೂರೈಸುವುದರಿಂದ ರೈತರಿಗೆ ತೊಂದರೆಯಾಗುತ್ತದೆ.

ಹಾಗೆಯೇ ಹಗಲು ಹೊತ್ತಿನಲ್ಲಿ ಕೆಲವೊಮ್ಮೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುವುದಿಲ್ಲ. ರೈತರು ಬೆಳೆಗೆ ನೀರು ಹಾಯಿಸುವುದಕ್ಕೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಹೆಸ್ಕಾಂ ಅಧಿಕಾರಿಗಳು ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ರೈತರು ಒತ್ತಾಯಿಸಿದರು.


ಸ್ಥಳಕ್ಕೆ ಭೇಟಿ ನೀಡಿದ ಹೆಸ್ಕಾಂ ಎಇಇ ಪಾಂಡುರಂಗ ತಳವಾರ ರೈತರೊಂದಿಗೆ ಚರ್ಚಿಸಿದರು. ವಿದ್ಯುತ್ ಪರಿವರ್ತಕದಲ್ಲಿ ಹೆಚ್ಚು ಲೋಡ್ ಹೊಂದಿರುವುದರಿಂದ ಒಂದೇ ಶೆಡ್ಯೂಲ್‌ನಲ್ಲಿ ಎಲ್ಲ ಕಡೆ ಬೆಳಗಿನ ಸಮಯದಲ್ಲಿ ವಿದ್ಯುತ್ ಪೂರೈಸಲು ತೊಂದರೆಯಾಗುತ್ತಿದೆ. ಆದ್ದರಿಂದ ಸಮಯ ಬದಲಾವಣೆ ಮಾಡಲಾಗಿದೆ.

ಬೆಳಗ್ಗೆ 6 ಗಂಟೆಯಿಂದ ಪೂರೈಸುತ್ತಿದ್ದ ತ್ರೀಫೆಸ್ ವಿದ್ಯುತ್ ಅನ್ನು ಮಧ್ಯಾಹ್ನ 12 ಗಂಟೆಯಿಂದ ಪೂರೈಸಲಾಗುವುದು ಎಂದರು. ಇದಕ್ಕೆ ಒಪ್ಪದ ರೈತರು ಮಧ್ಯಾಹ್ನ ಸಮಯದಲ್ಲಿ ರೈತರಿಗೆ ತೊಂದರೆಯಾಗುತ್ತದೆ. ಬೆಳಗಿನ ಜಾವ 6 ಗಂಟೆಯಿಂದಲೇ ನಿರಂತರ 6 ತಾಸು ತ್ರೀಫೆಸ್ ವಿದ್ಯುತ್ ಪೂರೈಸಬೇಕು ಎಂದರು. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಕೈಬಿಟ್ಟರು.


ಗದಗ ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಿವಾನಂದ ಇಟಗಿ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಪ್ರಕಾಶ ಸಜ್ಜನರ, ಶರಣಪ್ಪ ಕಂಬಳಿ, ಯಮನೂರಪ್ಪ ಹಳ್ಳಿಕೇರಿ, ಮಲ್ಲಪ್ಪ ತೋಟಪ್ಪನವರ, ಮಂಜಪ್ಪ ಹೆಬಸೂರ, ಶಿವಪ್ಪ ಸಜ್ಜನರ, ಶಿವಪ್ಪ ತೋರಡಿನ್, ಹನುಮಂತ ತೋರಡಿನ, ರಾಘು ಕುರಿ, ಸುಭಾಸ ಹಳ್ಯಾಳ, ಈರಣ್ಣ ಶೀರಿ, ಅಂದಪ್ಪ ಕುರಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net