

ಬೆಟ್ಟದಪುರ: ಹೆಚ್ಚು ಜಿಡ್ಡಿನ (ಫ್ಯಾಟ್) ಅಂಶವುಳ್ಳ ಹಾಲನ್ನು ಸರಬರಾಜು ಮಾಡಿದರೆ ಉತ್ತಮ ದರ ಸಿಗಲಿದೆ ಎಂದು ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಸತೀಶ್ ತಿಳಿಸಿದರು.
ಇಲ್ಲಿನ ಸುಣ್ಣದಕೇರಿ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಜಿಡ್ಡಿಗೆ ತಕ್ಕ ದುಡ್ಡು ಎನ್ನುವ ರೀತಿಯಲ್ಲಿ ಉತ್ತಮ ಕೊಬ್ಬಿನಂಶವಿರುವ ಹಾಲನ್ನು ಸಂಘಗಳಿಗೆ ಸರಬರಾಜು ಮಾಡಿದರೆ ಉತ್ತಮ ದರ ಸಿಗುತ್ತದೆ. ಆಗ ಸಂಘ ಅಭಿವೃದ್ಧಿಯಾಗುವುದರ ಜತೆಗೆ ಪೂರೈಕೆ ಆದವರಿಗೂ ಅನುಕೂಲವಾಗಲಿದೆ ಎಂದರು.
ಮೈಮುಲ್ ವಿಸ್ತರಣಾಧಿಕಾರಿ ಅವಿನಾಶ್ ಮಾತನಾಡಿ, ಹಾಲು ಉತ್ಪಾದಕರಿಗೆ ಉಚಿತವಾಗಿ ವಿಮೆ ಮಾಡಿಸಲಾಗುತ್ತಿದೆ. ಇದರ ಉಪಯೋಗವನ್ನು ಹಾಲು ಉತ್ಪಾದಕರು ಪಡೆದುಕೊಳ್ಳಬೇಕು ಎಂದರು.
ಸಂಘಕ್ಕೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಬಿ.ವಿ ರವಿ, ಬಿ.ಎನ್.ಮಹೇಶ್, ಶಿವು ಅವರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ರಾಮಲಿಂಗೇಗೌಡ, ಉಪಾಧ್ಯಕ್ಷ ಬಿ.ಎನ್.ಕುಮಾರ್, ನಿರ್ದೇಶಕರಾದ ರಾಮು, ಬಿ.ಎನ್.ಮಹೇಶ್, ಬಿ.ಪಿ.ನಟೇಶ್, ಬಿ.ಜಿ.ವೆಂಕಟೇಶ್, ಬಿ.ವಿ.ರವಿ, ಎಂ.ಕಾವೇರಿ, ಅಕ್ಕಯ್ಯಮ್ಮ, ಸಣ್ಣನಾರಾಯಣಿ, ತಿಮ್ಮಪ್ಪನಾಯಕ, ಕಾರ್ಯದರ್ಶಿ ಬಿ.ಎಂ ಮಂಜು ಇತರರಿದ್ದರು.