ವರ್ಷದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇವೆಗೆ ಲಭ್ಯ

ವರ್ಷದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇವೆಗೆ ಲಭ್ಯ
Published on

ಹಾಸನ: ಒಂದು ವರ್ಷದೊಳಗೆ ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ರೋಗಿಗಳ ಸೇವೆಗೆ ಲಭ್ಯವಾಗಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಶನಿವಾರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ

ಮಾತನಾಡಿ, 2018ರಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಆರಂಭವಾಗಿ, 2022ರಲ್ಲಿ ಅನುದಾನದ ಕೊರತೆಯಿಂದ ನಿಂತು ಹೋಗಿತ್ತು. ಇದಕ್ಕೆ ಬೇಕಿದ್ದ ಹೆಚ್ಚುವರಿ 9 ಕೋಟಿ ರೂ.ಅನುದಾನ ಬಿಡುಗಡೆಯಾಗಿರಲಿಲ್ಲ. ಹೀಗಾಗಿ ಕಟ್ಟಡ ಅಪೂರ್ಣವಾಗಿತ್ತು. ಹೆಚ್ಚುವರಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದರೂ ಹಣ ಬಿಡುಗಡೆಯಾಗಿರಲಿಲ್ಲ ಎಂದು ತಿಳಿಸಿದರು.

ಇತ್ತೀಚೆಗೆ ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ, ವೈದ್ಯಕೀಯ ಸಾಮರ್ಥ್ಯ ಹೆಚ್ಚಳ ಮಾಡಬೇಕೆಂದು ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆ ಮಾಡಿ ಗಮನಕ್ಕೆ ತಂದಿದ್ದರು. ನಾನು ಉಸ್ತುವಾರಿ ಸಚಿವನಾಗಿ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆ. ಮನವಿಗೆ ಸ್ಪಂದಿಸಿದ ಸರ್ಕಾರ, ಕಟ್ಟಡಕ್ಕೆ ಬೇಕಿದ್ದ ಹೆಚ್ಚುವರಿ 9 ಕೋಟಿ ರೂ.ಸೇರಿದಂತೆ ಒಟ್ಟು 63.34 ಕೋಟಿ ರೂ.ನೀಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಈ ಅನುದಾನದಿಂದ ಬಾಕಿ ಉಳಿದಿರುವ ಕಟ್ಟಡ ಕಾಮಗಾರಿಯನ್ನು ಮುಂದಿನ 4 ತಿಂಗಳಲ್ಲಿ ಮುಗಿಸಲಾಗುವುದು ಎಂದು ಹೇಳಿದರು.

ಮತ್ತೊಂದು ಪ್ರಸ್ತಾವನೆ: ನಂತರದಲ್ಲಿ ಆಮ್ಲಜನಕ ಲೈನ್, ಎಲೆಕ್ಟ್ರಿಕಲ್ ವರ್ಕ್ಸ್, ಬೆಂಕಿ ಅವಘಡ ತಡೆಯುವ ಉಪಕರಣ, ಮೆಡಿಕಲ್

ಎಮರ್ಜೆನ್ಸಿ ಕಮ್ಯೂನಿಕೇಷನ್ ಸಿಸ್ಟಂ, ಸಿಸಿ ಕ್ಯಾಮರಾ, ತುರ್ತು ಚಿಕಿತ್ಸಾ ಘಟಕ, ಲಿಫ್ಟ್ ಅಳವಡಿಸಲು ಇನ್ನೂ 22 ಕೋಟಿ ರೂ. ವೆಚ್ಚದ ಮತ್ತೊಂದು ಪ್ರಸ್ತಾವನೆ ಸಿದ್ಧವಾಗಿದೆ. ಈ ಸಂಬಂಧವೂ ಸಚಿವರೊಂದಿಗೆ ಮಾತನಾಡಿದ್ದು, ಮುಂದಿನ ಒಂದೆರಡು ತಿಂಗಳಲ್ಲಿ 22 ಕೋಟಿ ರೂ.ಗೂ ಅನುಮೋದನೆ ನೀಡಿ ಬಿಡುಗಡೆ ಮಾಡಿಸಲಾಗುವುದು. ಇದರಿಂದ ಬಾಕಿ ಸಿವಿಲ್ ಕಾಮಗಾರಿಗಳು ಪೂರ್ಣ ಆಗಲಿವೆ ಎಂದು ವಿವರಿಸಿದರು. ಅಲ್ಲದೆ 9 ಕೋಟಿ ರೂ. ವೆಚ್ಚದಲ್ಲಿ ಕ್ಯಾಥ್‌ಲ್ಯಾಬ್ ನಿರ್ಮಾಣಕ್ಕೂ ಪ್ರಸ್ತಾವನೆ ರೆಡಿಯಾಗಿದೆ. ಅದಕ್ಕೂ ಶೀಘ್ರವೇ ಮಂಜೂರಾತಿ ಕೊಡಿಸುವ ಕೆಲಸ ಮಾಡುತ್ತೇವೆ ಎಂದರು.

ಮೊದಲ ಬಿಲ್ಡಿಂಗ್ ಪೂರ್ಣ, 2ನೇಯದು ಕ್ಯಾಥ್‌ಲ್ಯಾಬ್ ನಿರ್ಮಾಣ, 3ನೇ ಹಂತದ್ದು 22 ಕೋಟಿ ರೂ.ವೆಚ್ಚದ ಇಂಟರ್‌ನಲ್ ಕಾಮಗಾರಿ, ಅಂತಿಮವಾಗಿ (4ನೇಹಂತ) ಉಪಕರಣ, ಸಿಬ್ಬಂದಿ ನೇಮಕ ಇತ್ಯಾದಿ ಕೆಲಸಗಳು ಸೂಪರ್ ಫಾಸ್ಟ್‌ನಲ್ಲಿ ಒಂದರ ಹಿಂದೆ ಒಂದರಂತೆ ಜತೆಯಾಗಿ ನಡೆದರೆ ಮುಂದಿನ ಆರೇಳು ತಿಂಗಳಲ್ಲಿ ಆಗಬೇಕು ಎಂದಿಕೊಂಡಿದ್ದೇನೆ ಎಂದು ತಿಳಿಸಿದರು.

ಕಾಲಮಿತಿಯೊಳಗೆ ಅಂದರೆ ಏಳೆಂಟು ತಿಂಗಳಲ್ಲಿ ಒಂದು ಯೋಜನೆ ಹಾಕಿಕೊಂಡು ಇಡೀಯಾಗಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಹಂತ ಹಂತ ವಾಗಿ ಎಲ್ಲ ರೀತಿಯ ಉದ್ದೇಶಿತ ಕಾಮಗಾರಿಗಳನ್ನು ಮುಗಿಸುವ ಮೂಲಕ ಒಂದು ವರ್ಷದೊಳಗೆ ಜನರಿಗೆ ಅಗತ್ಯವಿರುವ ತುರ್ತು ಆರೋಗ್ಯ ಸೌಲಭ್ಯ ಕಲ್ಪಿಸಲು ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಜಿಪಂ ಸಿಇಒ ಪೂರ್ಣಿಮಾ, ಎಸ್ಪಿ ಮೊಹಮ್ಮದ್ ಸುಜೀತಾ, ಹಿಮ್ಸ್ ನಿರ್ದೇಶಕ ಡಾ.ರಾಜಣ್ಣ, ಕೆಡಿಪಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net