

ಗುಂಡ್ಲುಪೇಟೆ: ತಾಲೂಕಿನ ರೈತರ ಅನುಕೂಲಕ್ಕೆಂದು ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರ ತೆರೆದಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ನಿಯಮಿತ ಬೆಂಗಳೂರು, ಇವರಿಂದ ನೂತನವಾಗಿ ತೆರೆದಿರುವ ಸೂರ್ಯಕಾಂತಿ ಖರೀದಿ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ತಾಲೂಕಿನ ರೈತರಿಗೆ ಅನುಕೂಲವಾಗಲೆಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಕ್ವಿಂಟಾಲ್‌ಗೆ 7,280 ರೂ. ದರ ನಿಗದಿಪಡಿಸಲಾಗಿದೆ. ಇಲ್ಲಿ ಪ್ರಸಕ್ತ ಸಾಲಿನ 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಗುಣಮಟ್ಟದ ಸೂರ್ಯಕಾಂತಿ ಖರೀದಿ ಮಾಡಲಾಗುತ್ತಿದ್ದು ಪ್ರತಿ ಎಕರೆಗೆ 3 ಕ್ವಿಂಟಾಲ್‌ನಂತೆ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಖರೀದಿಸಲಾಗುತ್ತದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಹಾಯಕ ನಿರ್ದೇಶಕ ಅರಕಲವಾಡಿ ಬಸವಣ್ಣ, ಸಮಿತಿಯ ಅಧ್ಯಕ್ಷ ಎಂ.ಎನ್.ಬಸವರಾಜು, ನಿರ್ದೇಶಕರಾದ ಪಿ.ಮಹದೇವಪ್ಪ, ಆರ್.ಎಸ್.ನಾಗರಾಜು, ಮಾಡ್ರಹಳ್ಳಿ ಮಹದೇವಪ್ಪ, ಕಾರ್ಯದರ್ಶಿ ಶ್ರೀಧರ್, ಅಧಿಕಾರಿ ಎ.ಎಲ್.ಮಹೇಶ್, ಖರೀದಿ ಕೇಂದ್ರದ ಉಸ್ತುವಾರಿ ಎಸ್.ಎಂ.ನಾಗಾರ್ಜುನ ಕುಮಾರ್, ರೈತ ಮುಖಂಡ ಕುಂದಕೆರೆ ಸಂಪತ್ತು, ಪುರಸಭೆ ಅಧ್ಯಕ್ಷ ಕಿರಣ್ ಗೌಡ ಇದ್ದರು.