

ನಾಗರಾಜ ಕುಂಕೂರ ಕುಂದಗೋಳ
ಕಳೆದ ಮೂರ್ನಾಲ್ಕು ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ತತ್ತರಿಸಿದ್ದಾರೆ. ಈ ವರ್ಷ ಜುಲೈ ಮೊದಲ ವಾರ ಸುರಿದ ಮಳೆ ನಂತರ ಕೈಕೊಟ್ಟಿದ್ದು ಅನ್ನದಾತರು ಆಕಾಶದತ್ತ ಚಿತ್ತ ನೆಟ್ಟಿದ್ದಾರೆ.
ಈ ಬಾರಿ ಮುಂಗಾರು ಮಳೆ ಜುಲೈನಲ್ಲಿ ಆರಂಭವಾಗಿದ್ದು, ರೈತರು ಸಾಲಸೋಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದರು. ಆದರೆ, ಆಗಸ್ಟ್ನಲ್ಲಿ ಆಕಾಶದಲ್ಲಿ ಮೋಡಗಳು ತೇಲುತ್ತಿವೆಯೇ ವಿನಃ ಮಳೆ ಸುರಿಯುತ್ತಿಲ್ಲ. ಇದರಿಂದ ಬೆಳೆಗಳು ಬಿಸಿಲಿನ ತಾಪಕ್ಕೆ ಜಮೀನಿನಲ್ಲೇ ಕಮರುವಂತಾಗಿದೆ.
ಈ ಬಾರಿ ತಾಲೂಕಿನಲ್ಲಿ 4,500 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬೆಳೆದಿದ್ದು, ಬಿಟಿ ಹತ್ತಿ 10330 ಹೆಕ್ಟೇರ್ ಬಿತ್ತನೆ ಆಗಿದೆ. ಶೇಂಗಾ 9100 ಹೆಕ್ಟೇರ್ ಹಾಗೂ ಗೋವಿನಜೋಳ 7700 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಆಗಸ್ಟ್ನಲ್ಲಿ 73 ಮೀ.ಮೀ. ಮಳೆ ನಿರೀಕ್ಷೆ ಇತ್ತು. ಆದರೆ, 32 ಮೀ.ಮೀ. ಮಳೆ ಸುರಿದಿದೆ. ಸಂಶಿ ಹೋಬಳಿ ಭಾಗದಲ್ಲಿ 80.6 ಮೀ.ಮೀ. ಮಳೆ ನಿರೀಕ್ಷೆ ಇತ್ತು. ಆದರೆ, ಅಲ್ಲೂ 14.9 ಮೀ.ಮೀ. ಮಳೆಯಾಗಿ 65 ಮೀ.ಮೀ. ಮಳೆ ಕೊರತೆಯಾಗಿದೆ.
ಹರಸಾಹಸ: ಬೆಳೆ ಒಣಗುತ್ತಿರುವುದನ್ನು ಕಂಡ ರೈತರು ಮುಂದೆ ಮಳೆ ಆಗುತ್ತದೆ ಎಂಬ ಭರವಸೆಯಿಂದ ಕೆರೆ- ಕಟ್ಟೆಗಳಿಂದ ಟ್ಯಾಂಕರ್ ಮೂಲಕ ನೀರು ತಂದು ಬೆಳೆಗೆ ಸಿಂಪಡಣೆ ಮಾಡುತ್ತಿದ್ದಾನೆ. ಕೆಲವರು ಕೃಷಿ ಹೊಂಡದಲ್ಲಿರುವ ನೀರನ್ನು ಪಂಪ್ಸೆಟ್ ಮೂಲಕ ಬೆಳೆಗೆ ಹರಿಸುತ್ತಿದ್ದಾರೆ.
ಮುಂಗಾರು ವಿಳಂಬವಾಗಿದ್ದರಿಂದ ರೈತರು ಮೆಣಸಿನಕಾಯಿ ಬೆಳೆ ಕಡೆಗೆ ಮುಖ ಮಾಡಿದ್ದಾರೆ. ಈಗಾಗಲೇ 4,500 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ವಾರದಲ್ಲಿ ಮಳೆ ಆಗದಿದ್ದರೆ ಬೆಳೆಗಳು ಹಾಳಾಗುವ ಸಾಧ್ಯತೆ ಇದೆ. | ಮಂಜುನಾಥ ಕರೋಸಿ ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ
ಲಕ್ಷಾಂತರ ರೂಪಾಯಿ ಸಾಲಸೋಲ ಮಾಡಿ ಬಿತ್ತನೆ ಮಾಡಿದ್ದೇವೆ. ಮಳೆ ಕೈಕೊಟ್ಟಿದ್ದರಿಂದ ಬೆಳೆಗಳು ಒಣಗಿವೆ. ಬೆಳೆ ವಿಮೆ,ಬೆಳೆ ಪರಿಹಾರ ನೀಡಿದರೆ ಮಾತ್ರ ರೈತನ ಉಸಿರು ನಿಲ್ಲುತ್ತದೆ. | ಪ್ರದೀಪ ಮೇಲ್ಮಾಳಗಿ ಬೆನಕನಹಳ್ಳಿ ರೈತ
ಜಿಲ್ಲಾಧಿಕಾರಿ ಸೂಚನೆಯಂತೆ ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಈಗಾಗಲೇ ಜಂಟಿ ಸಮೀಕ್ಷೆ ಮಾಡಿದ್ದು, ಬೆಳೆ ಹಾನಿಯಾದ ಬಗ್ಗೆ ವರದಿ ಸಿದ್ಧಪಡಿಸಿ ಅವರಿಗೆ ಸಲ್ಲಿಸಲಾಗುವುದು. | ಭಾರತಿ ಮೆಣಸಿನಕಾಯಿ ಕೃಷಿ ಇಲಾಖೆಯ ಸಹಾಯಕ ಅಧಿಕಾರಿ