ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿ : ನಿವೃತ್ತ ಪ್ರಾಂಶುಪಾಲ ಎಂ.ಸತೀಶ್ ಭಟ್

summer camp
ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಬೇಸಿಗೆ ಕ್ರೀಡಾ ಶಿಬಿರವನ್ನು ನಿವೃತ್ತ ಪ್ರಾಂಶುಪಾಲ ಎಂ.ಸತೀಶ್ ಭಟ್ ಉದ್ಘಾಟಿಸಿದರು.
Published on

ವಿಜಯವಾಣಿ ಸುದ್ದಿಜಾಲ ಕಡಬ

ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಬೇಸಿಗೆ ಕ್ರೀಡಾ ಶಿಬಿರದ ಉದ್ಘಾಟನೆ ನಡೆಯಿತು. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ.ಸತೀಶ್ ಭಟ್ ಉದ್ಘಾಟಿಸಿ ಮಾತನಾಡಿ, ಕ್ರೀಡೆ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುತ್ತದೆ. ವಿದ್ಯಾರ್ಥಿ ಮಾನಸಿಕವಾಗಿ ಸದೃಢರಾಗಬೇಕಾದರೆ, ದೈಹಿಕವಾಗಿಯೂ ಸದೃಢರಾಗುವುದು ಮುಖ್ಯವಾಗುತ್ತದೆ. ಈ ಶಿಬಿರ ಸೇರಿರುವ ಎಲ್ಲ ಶಿಬಿರಾರ್ಥಿಗಳಲ್ಲಿ ದೈಹಿಕ ಸದೃಢತೆಯನ್ನು ತಂದು ಮಾನಸಿಕ ಸ್ವಾಸ್ಥ್ಯ ಅಭಿವೃದ್ಧಿಪಡಿಸುವಲ್ಲಿ ಸಹಕಾರ ನೀಡಲಿ ಎಂದರು.

ಸುಬ್ರಹ್ಮಣ್ಯ ಕೆಎಸ್‌ಎಸ್ ಕಾಲೇಜು ಉಪನ್ಯಾಸಕ ಸೃಜನ್ ಮುಂಡೋಡಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸದೆ ಆನ್‌ಲೈನ್ ಆಟಗಳಿಗೆ ಗಮನ ಕೊಡುತ್ತಾ ಇರುತ್ತಾರೆ. ಆನ್‌ಲೈನ್ ಆಟವು ಕ್ರಮೇಣ ಚಟವಾಗಿ ಬದಲಾಗಿ ವಿದ್ಯಾರ್ಥಿಯ ಬೆಳವಣಿಗೆಗೆ ಮಾರಕವಾಗುತ್ತದೆ. ಇಂತಹ ಶಿಬಿರಗಳಲ್ಲಿ ನಡೆಯುವ ತರಬೇತಿ, ಆಟೋಟಗಳಲ್ಲಿ ಭಾಗವಹಿಸುತ್ತಾ ಮೊಬೈಲ್‌ನ ದುಷ್ಚಟದಿಂದ ದೂರವಾಗುವ ಪ್ರಯತ್ನ ಮಾಡಬೇಕು ಎಂದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ ಕೊಯಿಲ ಶುಭ ಹಾರೈಸಿದರು. ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಗಣೇಶ್ ಕೆ. ಮ್ಯಾಟ್ ಕಬ್ಬಡಿ ತರಬೇತಿಗೆ ಚಾಲನೆ ನೀಡಿದರು. ರಾಷ್ಟ್ರಮಟ್ಟದ ಕಬ್ಬಡಿ ತರಬೇತುದಾರರಾದ ಮೂರ್ತಿ, ಯೋಗೀಶ್ ಮತ್ತು ಪ್ರೌಢಶಾಲೆ ವಿಭಾಗದ ದೈಹಿಕ ಶಿಕ್ಷಕಿ ಪ್ರಫುಲ್ಲ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಕೆ.ಪ್ರಾಸ್ತಾವಿಸಿ ಸ್ವಾಗತಿಸಿ, ದೈಹಿಕ ಶಿಕ್ಷಣ ಉಪನ್ಯಾಸಕ ಗಣೇಶ್ ಕೆ.ವಂದಿಸಿದರು. ಉಪನ್ಯಾಸಕ ಚೇತನ್ ಎಂ.ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net