

ರಾಮನಗರ
ಕರ್ನಾಟಕ ಸಾಹಸ ಕಲಾ ಅಕಾಡೆಮಿ ಖೇಲೋ ಇಂಡಿಯಾ ಮಲ್ಲಕಂಬ ಕೇಂದ್ರ ವತಿಯಿಂದ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದ ಪ್ರಯೋಜನವನ್ನು ಮಕ್ಕಳು ಸದುಪಯೋಗ ಪಡೆದುಕೊಳ್ಳಲಿ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಹಾಸನ ರಘು ತಿಳಿಸಿದರು.
ರಾಮನಗರದ ರಾಮದೇವರಬೆಟ್ಟದ ರಸ್ತೆಯಲ್ಲಿರುವ ಸಾಹಸ ಕಲಾ ಶಿಕ್ಷಣ ಕೇಂದ್ರದ ಆವರಣದಲ್ಲಿ ಕರ್ನಾಟಕ ಸಾಹಸ ಕಲಾ ಅಕಾಡೆಮಿ ಖೇಲೋ ಇಂಡಿಯಾ ಮಲ್ಲಕಂಬ ಕೇಂದ್ರ, ರಾಮನಗರ, ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು, ಎಬಿಸಿಡಿ ಡ್ಯಾನ್ಸ್ ಅಕಾಡೆಮಿ ರಾಮನಗರ ಹಾಗೂ ಮಾನವಿ ಜಾನಪದ ಕಲಾಸಂಸ್ಥೆ ರಾಮನಗರ ಇವರ ಸಹಯೋಗದಲ್ಲಿ ಭಾನುವಾರ ಡೊಳ್ಳು ಬಾರಿಸುವ ಮುಖೇನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಹಸ ಕಲಾ ಕೇಂದ್ರದಲ್ಲಿ 20 ದಿನಗಳವರೆಗೆ ಮಕ್ಕಳಿಗೆ ಸಾಹಸಕಲೆ ಪರಿಚಯಿಸಲು ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಯೋಗ, ಮಲ್ಲಕಂಬ, ಜಿಮ್ನಾಸ್ಟಿಕ್, ರಂಗಾಭಿನಯ, ಚಿತ್ರಕಲೆ, ಟ್ರಕ್ಕಿಂಗ್, ಜಾನಪದ ಪ್ರದರ್ಶನ ಕಲೆ, ಗಾಯನ, ನೃತ್ಯ, ಆತ್ಮರಕ್ಷಣೆ, ಮತ್ತು ಸಮರ ಕಲೆಗಳು, ಸಾಹಸ ಕ್ರೀಡೆಗಳು, ಪರಿಸರ ಅಧ್ಯಯನದ ತರಬೇತಿಗಳನ್ನು ಪ್ರಾರಂಭವಾಗುತ್ತಿದೆ. ಆಸಕ್ತ ವಿದ್ಯಾರ್ಥಿಗಳು ಶಿಬಿರದ ಸದುಪಯೋಗಪಡಿಸಿಕೊಂಡು ನಶಿಸಿ ಹೋಗುತ್ತಿರುವ ಸಾಹಸ ಕ್ರೀಡೆಗಳನ್ನು ಮುಖ್ಯವಾಹಿನಿಗೆ ತರಲು ಸಹಕಾರ ನೀಡಬೇಕು ಎಂದು ತಿಳಿಸಿದರು.
ಖೇಲೋ ಇಂಡಿಯಾ ಮಲ್ಲಕಂಬ ಕೇಂದ್ರದ ಗೌರವಾಧ್ಯಕ್ಷ ರಾಜಶೇಖರ್ ಮಾತನಾಡಿ, ರಾಮನಗರದ ಮಕ್ಕಳು ಈ ಶಿಬಿರದಲ್ಲಿ ತರಬೇತಿ ಪಡೆದು ರಾಷ್ಟ್ರಮಟ್ಟದಲ್ಲಿ ಕೀರ್ತಿ ಗಳಿಸಬೇಕು ಎಂದು ಹೇಳಿದರು.