

ಮಾಗಡಿ : ಭಾರ ಎತ್ತುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಮಾಗಡಿ ತಾಲೂಕಿನ ರೇಷ್ಮೆ ಇಲಾಖೆ ನೋಡಲ್ ಅಧಿಕಾರಿ ಹೊಸಪೇಟೆ ಸುಲ್ತಾನ್ ಬಾಬಾಗೆ ಬೆಳ್ಳಿ ಪದಕ ಲಭಿಸಿದೆ.
ಕೇರಳದ ಎರ್ನಾಕುಲಂ ಕೊಚ್ಚಿಯಲ್ಲಿ ಮೇ 3 ಮತ್ತು 4 ರಂದು ಆಯೋಜಿಸಿದ್ದ ಭಾರ ಎತ್ತುವ ರಾಷ್ಟ್ರೀಯ ನಾಲ್ಕನೇ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದು, ಅಂತೆಯೇ ಆಗಸ್ಟ್ 1 ರಿಂದ 10ರವರೆಗೆ ಪೋರ್ಡ್ ನಾರ್ವೆ ಡೆನ್ಮಾರ್ಕ್‌ನಲ್ಲಿ ನಡೆಯುವ ಭಾರ ಎತ್ತುವ ಅಂತಾರಾಷ್ಟ್ರೀಯಮಟ್ಟದ ಸ್ಪರ್ಧೆ ಹಾಗೂ ನವೆಂಬರ್‌ನಲ್ಲಿ ನಡೆಯುವ ಮಾಸ್ಟರ್ ಏಷಿಯನ್ ಗೇಮ್ಸ್‌ಗೆ ಆಯ್ಕೆಯಾಗಿದ್ದಾರೆ.
ಸುಲ್ತಾನ್ ಬಾಬಾ ಈಗಾಗಲೇ ಕುಸ್ತಿ, ಭಾರ ಎತ್ತುವ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಪಡೆದು ಅಂತಾರಾಷ್ಟ್ರೀಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ‘ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ 5 ಬಾರಿ ಚಿನ್ನದ ಪದಕ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದೇನೆ. ಏಷ್ಯನ್ ಗೇಮ್ಸ್, ಒಲಿಪಿಂಕ್ಸ್‌ಗಳಲ್ಲಿ ಸಾಧನೆ ಮಾಡಲು ಮತ್ತಷ್ಟು ಬೆಂಬಲ, ಸಹಕಾರ ಅಗತ್ಯವಾಗಿದೆ. ಮಾಗಡಿ ತಾಲೂಕಿನಲ್ಲಿ ಕುಸ್ತಿಪಟುಗಳ ಸಂಖ್ಯೆ ಹೆಚ್ಚಿದೆ, ಇದಕ್ಕೆ ಸಾಕ್ಷಿ ಎಂಬಂತೆ ಎಲ್ಲೆಡೆ ಗರಡಿ ಮನೆ ಕಾಣಬಹುದಾಗಿದೆ. ಕುಸ್ತಿ, ಭಾರ ಎತ್ತುವ ಬಗ್ಗೆ ಯುವಕರಲ್ಲಿ ಹೆಚ್ಚು ಆಸಕ್ತಿ ಇದ್ದು, ಇದಕ್ಕೆ ಪೂರಕವಾಗಿ ತರಬೇತಿ ಕೇಂದ್ರ ಆರಂಭಿಸಿದರೆ ಮತ್ತಷ್ಟು ಕುಸ್ತಿ ಹಾಗೂ ಭಾರ ಎತ್ತುವ ಕ್ರೀಡಾಪಟುಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯಮಟ್ಟದಲ್ಲಿ ಸಾಧನೆ ಮಾಡಲು ಸಹಕಾರಿಯಾಗಲಿದೆ’ ಎನ್ನುತ್ತಾರೆ ಸುಲ್ತಾನ್ ಬಾಬಾ.
ನೌಕರರ ಸಂಘದ ಜಿಲ್ಲಾಧ್ಯಕ್ಷ ಸತೀಶ್ ಮಾತನಾಡಿ, ಸರ್ಕಾರಿ ನೌಕರರು ಹೆಚ್ಚು ಒತ್ತಡದಲ್ಲಿರುತ್ತಾರೆ. ಈ ಮಧ್ಯೆ ಸುಲ್ತಾನ್ ಬಾಬಾ ಚಿಕ್ಕವಯಸ್ಸಿನಿಂದಲ್ಲೇ ಭಾರ ಎತ್ತುವ ಸ್ಪರ್ದೆಗಳಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ, ಕಂಚು ಪದಕಗಳನ್ನು ಪಡೆದು 2016ರಿಂದ ನಿರಂತರವಾಗಿ ಸರ್ಕಾರಿ ನೌಕರರ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕಗಳನ್ನು ಪಡೆದು ಮಾದರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಒಲಿಂಪಿಕ್, ಏಷಿಯನ್ ಗೇಮ್ಸ್‌ಗಳಲ್ಲಿ ಸ್ಪರ್ಧಿಸಲು ಸಹಕಾರ ನೀಡಲಾಗುವುದು ಎಂದರು.