

ಬ್ಯಾಡಗಿ: ತಾಲೂಕಿನ ಸುಕ್ಷೇತ್ರ ಗುಡ್ಡದಮಲ್ಲಾಪುರ ಷ.ಬ್ರ.ಮೂಕಪ್ಪಸ್ವಾಮಿಗಳ ದರ್ಶನಾಶೀರ್ವಾದ ಧಾರ್ವಿುಕ ಕಾರ್ಯಕ್ರಮ ಆ. 5ರಂದು ಜರುಗಲಿದೆ.
ಇಲ್ಲಿನ ಮುಪ್ಪಿನೇಶ್ವರ ಮಠದಲ್ಲಿ ಬೆಳಗ್ಗೆ 10 ಗಂಟೆಗೆ ಮಲ್ಲೂರು ರಸ್ತೆಯ ವಾಸ್ತವ ಮನೆಯಿಂದ ಮೆರವಣಿಗೆ ಮೂಲಕ ಶ್ರೀಗಳು ಆಗಮಿಸಲಿದ್ದು, ಮಧ್ಯಾಹ್ನ 1 ಗಂಟೆಯವರೆಗೆ ಆಶೀರ್ವಾದ ಮಾಡಲಿದ್ದಾರೆ. ಶಾಸ್ತ್ರೋಕ್ತವಾಗಿ ಮಂತ್ರ ಘೊಷಣೆಗಳು ಜರುಗಲಿವೆ.
ಜೋಡು ನಂದಿ ದರ್ಶನ: ಶ್ರಾವಣ ಮಾಸ ಸೇರಿದಂತೆ ವಿಶಿಷ್ಟ ದಿನಗಳಲ್ಲಿ ಜೋಡು ನಂದೀಶ್ವರ ದರ್ಶನ ಹಾಗೂ ಆಶೀರ್ವಾದದಿಂದ ಭಕ್ತರ ಸಂಕಲ್ಪ ಈಡೇರಲಿವೆ ಎಂಬ ಪ್ರತೀತಿಯಿದ್ದು, ನಾಡಿನ ಮೂಲೆಮೂಲೆಯಿಂದ ಭಕ್ತರು ಶ್ರೀಗಳ ಆಶೀರ್ವಾದ ಪಡೆಯಲು ಧಾವಿಸುತ್ತಿದ್ದಾರೆ. ಸಂತಾನ ಫಲ, ರೋಗರುಜಿನ, ವಿವಿಧ ಸಂಕಷ್ಟಗಳು, ನಾನಾ ತೊಂದರೆಯಲ್ಲಿರುವ ಭಕ್ತರು ಜೋಡುಶ್ರೀಗಳಿಂದ ಆಶೀರ್ವಾದ ಹಾಗೂ ಮಡೇಸ್ನಾನ ಪದ್ಧತಿಯಿಂದ ಪರಿಹಾರ ಪಡೆದುಕೊಂಡಿದ್ದಾರೆ. ನಡೆದಾಡುವ ದೇವರೆಂದೇ ಖ್ಯಾತವಾಗಿರುವ ಅಜ್ಜಯ್ಯನವರಿಗೆ ರಾಜ್ಯ ಹೊರರಾಜ್ಯಗಳಲ್ಲಿ ಭಕ್ತರಿದ್ದಾರೆ.
ಶ್ರಾವಣ ಮಾಸ ಉತ್ಸವ ಸಮಿತಿ ಅಧ್ಯಕ್ಷ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆಯುವಂತೆ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.