ಆತ್ಮಹತ್ಯೆ ತಡೆಗಟ್ಟುವಲ್ಲಿ ಶಿಕ್ಷಣ, ಅರಿವು ಪ್ರಮುಖ ಪಾತ್ರ: ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ

Sudhee_10_N_Sprite_Inaug_@_NIMHANS_Board_Room (4)
Published on

ಬೆಂಗಳೂರು: ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಶಿಕ್ಷಣ ಮತ್ತು ಅರಿವು ಆತ್ಮಹತ್ಯೆಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವ ಆತ್ಮಹತ್ಯೆ ತಡೆ ದಿನದ ಅಂಗವಾಗಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆ್ ಮೆಂಟಲ್ ಹೆಲ್ತ್ ಆ್ಯಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್) ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಆತ್ಮಹತ್ಯೆ ತಡೆಗಟ್ಟುವಿಕೆ ಕೇಂದ್ರ’ ಉದ್ಘಾಟಿಸಿ ಅವರು ಮಾತನಾಡಿದರು. ಒತ್ತಡ, ಖಿನ್ನತೆ, ದುಷ್ಚಟ ಸೇರಿ ನಾನಾ ಕಾರಣಗಳಿಂದ ಸಶಸ ಪಡೆ, ವೈದ್ಯಕೀಯ ಸೇರಿ ಪ್ರತಿಯೊಂದು ಕ್ಷೇತ್ರದಲ್ಲೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ನಿಮ್ಹಾನ್ಸ್ ಸಹಯೋಗದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ನೀತಿ ಸಹ ರೂಪಿಸುತ್ತಿದೆ. ನಿಮ್ಹಾನ್ಸ್ ಸಂಸ್ಥೆ ಕೇಂದ್ರ ಸರ್ಕಾರದ್ದೇ ಆದರೂ, ರಾಜ್ಯ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು.

ವ್ಯಕ್ತಿಯಲ್ಲಿನ ಬದಲಾವಣೆ ಗಮನಿಸಬೇಕು: ಪ್ರತಿ ವ್ಯಕ್ತಿಯ ಜೀವನದಲ್ಲೂ ಒಂದಲ್ಲ ಒಂದು ಸಂದರ್ಭದಲ್ಲಿ ಕಹಿ ಘಟನೆ ಸಂಭವಿಸುತ್ತದೆ. ಅಂತಹ ಸಮಯದಲ್ಲಿ ಅವರೊಂದಿಗೆ ನಿರಂತರ ಸಂಪರ್ಕ ಹೊಂದುವ ಮೂಲಕ ಆ ಸಮಸ್ಯೆ ಎದುರಿಸಲು ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಅಗತ್ಯವಿದೆ. ಆದರೆ ತಿಳಿದೋ ತಿಳಿಯದೆಯೋ ಆತ್ಮಹತ್ಯೆಗೆ ಪ್ರಯತ್ನಿಸುವ ವ್ಯಕ್ತಿಗಳ ಸ್ವಭಾವದಲ್ಲಾಗುವ ಬದಲಾವಣೆಗಳನ್ನು ಗಮನಿಸುವುದಿಲ್ಲ. ಪರಿಣಾಮ ಒಂದಲ್ಲ ಒಂದುದಿನ ಅವರು ಅತ್ಮಹತ್ಯೆ ದಾರಿ ಹಿಡಿಯುತ್ತಾರೆ. ಹಾಗಾಗಿ ಜನರಿಗೆ ಆತ್ಮಹತ್ಯೆಯ ಮಾಡಿಕೊಳ್ಳುವ ಮುನ್ನ ಆ ವ್ಯಕ್ತಿಗಳಲ್ಲಿ ಆಗುವ ಬದಲಾವಣೆಗಳು ಹಾಗೂ ಅದಕ್ಕೆ ಪ್ರಚೋದನೆ ನೀಡುವ ಅಂಶಗಳ ಬಗ್ಗೆ ತಿಳುವಳಿಕೆ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಈಗಾಗಲೇ ಟೆಲಿ ಮನಸ್ ಮುಖಾಂತರ ಲಕ್ಷಾಂತರ ಜನರಿಗೆ ಮಾನಸಿಕ ಆರೋಗ್ಯ ಸಂಬಂಧ ಸಲಹೆ ನೀಡಲಾಗಿದೆ. ಇದಲ್ಲದೆ ಜಾಗೃತಿ ಕಾರ್ಯಕ್ರಮಗಳ ಮೂಲಕ ಅತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ನಿಮ್ಹಾನ್ಸ್ ಜತೆ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.

ಪರಿಣಾಮಕಾರಿ ಆರೈಕೆಯಲ್ಲಿ ಪ್ರಮುಖ ಪಾತ್ರ: ಆತ್ಮಹತ್ಯೆ ಪ್ರಕರಣಗಳನ್ನು ತಡೆಯಲು ಮಾನಸಿಕ ಆರೋಗ್ಯ ಮೌಲ್ಯಮಾಪನ ಅವಶ್ಯಕವಾಗಿದೆ. ಇದರಿಂದ ಮೂಲ ಕಾರಣಗಳನ್ನು ತಿಳಿದು ಪರಿಹರಿಸಲು ಮತ್ತು ಪರಿಣಾಮಕಾರಿ ಆರೈಕೆಯನ್ನು ಒದಗಿಸುವಲ್ಲಿ ಆತ್ಮಹತ್ಯೆ ತಡೆಗಟ್ಟುವಿಕೆ ಕೇಂದ್ರವು ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ನಿಮ್ಹಾನ್ಸ್‌ನ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಹೇಳಿದರು. ಇದು ಸಾಮಾನ್ಯ ಆಸ್ಪತ್ರೆಗಳಲ್ಲಿ ಸ್ವಯಂ-ಹಾನಿಕಾರಕ ರೋಗಿಗಳಿಗೆ ಮಾನಸಿಕ ಆರೋಗ್ಯ ಮೌಲ್ಯಮಾಪನ ಮತ್ತು ಆರೈಕೆ ಯೋಜನೆ ಸಾಮರ್ಥ್ಯವನ್ನು ಸುಧಾರಿಸಲು ಸಮಗ್ರ ಕಾರ್ಯಕ್ರಮ ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸುವ ಮೂಲಕ ಅತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಮಾನಸಿಕ ಆರೋಗ್ಯ ಮತ್ತು ಚಿಕಿತ್ಸೆ ಕುರಿತು ಬಹುಭಾಷಾ ಪೋಸ್ಟರ್ ಹಾಗೂ ಇನ್ಫೋಗ್ರಾಫಿಕ್ ವೀಡಿಯೋ ಬಿಡುಗಡೆ ಮಾಡಲಾಯಿತು. ನಿಮ್ಹಾನ್ಸ್‌ನ ಮನೋರೋಗ ತಜ್ಞರು ಸೇರಿ ವಿವಿಧ ವಿಭಾಗಗಳ ವೈದ್ಯರು ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net