ರಾಮಲಿಂಗಾಪುರದಲ್ಲಿ ಆತ್ಮಹತ್ಯೆ ಪ್ರಕರಣ ಅಂಗನವಾಡಿ ಕಾರ್ಯಕರ್ತೆ ಕೈವಾಡ?

Published on

ಕ್ರಮ ಕೈಗೊಳ್ಳಲು ರಾಮಲಿಂಗಾಪುರ ಗ್ರಾಮಸ್ಥರಿಂದ ಸಿಡಿಪಿಒಗೆ ಮನವಿ ಸಲ್ಲಿಕೆ

ಶಿಡ್ಲಟ್ಟ: ವರದಣೆ ಕಿರುಕುಳಕ್ಕೆ ಬೇಸತ್ತು ಇತ್ತೀಚೆಗೆ ನವ ವಿವಾಹಿತೆ ಆತ್ಮಹತ್ಯೆ ಪ್ರಕರಣ ಸಂಬಂಧ ಅಂಗನವಾಡಿ ಕಾರ್ಯಕರ್ತೆಯೊಬ್ಬರ ಮೇಲೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಜತೆಗೆ ಕಾರ್ಯಕರ್ತೆ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಮಲಿಂಗಾಪುರ ಗ್ರಾಮಸ್ಥರು ಸಿಡಿಪಿಒಗೆ ಮನವಿ ಸಲ್ಲಿಸಿದರು.

ನಗರದ ಸಿಡಿಪಿಒ ಕಚೇರಿಗೆ ಆಗಮಿಸಿದ ರಾಮಲಿಂಗಾಪುರದ 50ಕ್ಕೂ ಹೆಚ್ಚು ಮಂದಿ, ನವವಿವಾಹಿತೆ ಶಿರಿಷಾ ವರದಣೆ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ ಅಂಗನವಾಡಿ ಕಾರ್ಯಕರ್ತೆಯ ಕೈವಾಡವೂ ಇದೆ

ಎಂದು ಸಿಡಿಪಿಒಗೆ ದೂರಿದರು. ಸರಿಯಾಗಿ ಅಂಗನವಾಡಿ ಕೇಂದ್ರಕ್ಕೆ ಬರುವುದಿಲ್ಲ. ಪೌಷ್ಟಿಕ ಆಹಾರ, ಮೊಟ್ಟೆ ಸೇರಿ ಇತರ ಪರಿಕರಗಳನ್ನು ಫಲಾನುಭವಿಗಳಿಗೆ ವಿತರಿಸುತ್ತಿಲ್ಲ. ಆಹಾರ ಪದಾರ್ಥಗಳನ್ನು ಅಂಗನವಾಡಿ ಕೇಂದ್ರದ ಬದಲಿಗೆ ಸ್ವಂತ ಮನೆಯಲ್ಲಿ ದಾಸ್ತಾನು ಮಾಡಿಕೊಳ್ಳುತ್ತಾರೆ. ಇವೆಲ್ಲವನ್ನೂ ಪ್ರಶ್ನಿಸಿದರೆ ನಮ್ಮ ವಿರುದ್ಧ ಪಿತೂರಿ ಮಾಡುತ್ತಾರೆ ಎಂದು ಆರೋಪಿಸಿದರು. ಆಕೆಯ ಮೇಲೆ ವಿವಿಧ ಕಾರಣಗಳಿಗೆ ಎರಡು ಮೂರು ದೂರುಗಳು ದಾಖಲಾಗಿವೆ. ನ್ಯಾಯಾಲಯಕ್ಕೆ ಹಾಜರಾಗುವುದಕ್ಕಾಗಿ ಅಂಗನವಾಡಿಗೂ ಸರಿಯಾಗಿ ಹಾಜರಾಗುವುದಿಲ್ಲ. ಇಲಾಖೆಯ ಮೇಲಧಿಕಾರಿಗಳಿಗೂ ಈ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಸಮಸ್ಯೆ ಹೇಳಿಕೊಂಡರು. ಆಕೆಯನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಸಿಡಿಪಿಒ ವಿದ್ಯಾ ವಸದ್​, ಸದರಿ ಅಂಗನವಾಡಿ ಕಾರ್ಯಕರ್ತೆ ಮೇಲೆ ದಾಖಲಾಗಿರುವ ಪೊಲೀಸ್​ ಕೇಸ್​ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ. ಎಲ್ಲ ಆರೋಪಗಳ ಬಗ್ಗೆ ತನಿಖೆ ನಡೆಸಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡುತ್ತೇನೆ. ಮೇಲಧಿಕಾರಿಗಳ ನಿರ್ದೇಶನದಂತೆ ಮುಂದಿನ ಕ್ರಮ ಜರುಗಿಸುತ್ತೇನೆಂದು ಭರವಸೆ ನೀಡಿದರು. ಆರೋಪಿಯ ವಿರುದ್ಧ ಕ್ರಮ ಆಗುವವರೆಗೂ ಅಂಗನವಾಡಿ ಕೇಂದ್ರ ನಡೆಯಲು ಬಿಡುವುದಿಲ್ಲ. ನಮ್ಮ ಮಕ್ಕಳನ್ನು ಕೇಂದ್ರಕ್ಕೆ ಕಳುಹಿಸುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.ಆದರೆ, ಇದಕ್ಕೆ ಒಪ್ಪದ ಸಿಡಿಪಿಒ, ಯಾರೋ ಒಬ್ಬರಿಂದ ಹಲವರಿಗೆ ತೊಂದರೆ ಆಗುವುದು ಬೇಡ. ಆಕೆ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಆಗುತ್ತದೆ. ಆದರೆ ಅದಕ್ಕಾಗಿ ಗ್ರಾಮದ ಮಕ್ಕಳು, ಬಾಣಂತಿ, ಗರ್ಭಿಣಿಯರು ಸರ್ಕಾರದ ಸವಲತ್ತುಗಳಿಂದ ವಂಚಿತರಾಗಬಾರದು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಕೊನೆಗೆ ಆರೋಪಿಯ ಬದಲಿಗೆ ಬೇರೆ ಕಾರ್ಯಕರ್ತೆಯನ್ನು ನಿಮ್ಮೂರಿಗೆ ನೇಮಿಸಲಾಗುವುದು ಎಂದು ಹೇಳಿ ಗ್ರಾಮಸ್ಥರ ಮನವೊಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net