ಜಿ.ಬಿ.ಭಟ್ ಆತ್ಮಹತ್ಯೆ ಪ್ರಕರಣ
ಮೂವರ ವಿರುದ್ಧ ದೂರು ದಾಖಲು

Ganapathi Balgangadar Bhat Nelemav)
Published on

ಸಿದ್ದಾಪುರ: ನೆಲೆಮಾವು ಸೇವಾ ಸಹಕಾರ ಸಂಘದ ಅಧ್ಯಕ್ಷ ಗಣಪತಿ ಬಾಲಗಂಗಾಧರ ಭಟ್ (ಜಿ.ಬಿ.ಭಟ್) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲೆಯ ಮೂವರ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಮೂವರು ಜಿ.ಬಿ.ಭಟ್ ಅವರ ಆತ್ಮಹತ್ಯೆಗೆ ಪ್ರೇರೇಪಿಸಿದ್ದಾರೆ ಎಂದು ಮೃತರ ಪುತ್ರ ಅತ್ರಿ ದೂರು ನೀಡಿದ್ದಾರೆ.
ಶುಕ್ರವಾರ ಮಧ್ಯಾಹ್ನ ಜಿ.ಬಿ.ಭಟ್ ಅವರು ಸಹೋದರರ ಫಾರ್ಮ್ ಹೌಸ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಹುಬ್ಬಳ್ಳಿಯ ಈರಬಸಪ್ಪ ವಾಲಿಕಾರ, ಧಾರವಾಡದ ಚಂದ್ರಶೇಖರ ಪೂಜಾರ, ಶಿವಶಂಕರಪ್ಪ ಕುರಿ ಅವರ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಿ.ಬಿ.ಭಟ್ ಅವರು ಈ ಮೂವರಿಂದ ಹಣ ಪಡೆದು ಶ್ಯಾಮ ಭಟ್ ಎಂಬುವವರಿಗೆ ನೀಡಿದ್ದರು ಎನ್ನಲಾಗಿದೆ. ಅವರು ಹಣ ಮರಳಿಸದೇ ಸತಾಯಿಸುತ್ತಿದ್ದರು. ಹಣ ಕೊಟ್ಟ ಮೂವರು ಮನೆಯ ಹತ್ತಿರ ಬಂದು ಹಣಕ್ಕಾಗಿ ಪೀಡಿಸುತ್ತಿದ್ದರು ಎನ್ನಲಾಗಿದೆ. ಮಾರ್ಚ್ 10 ರಂದು ಮನೆಗೆ ಬಂದು ಗಲಾಟೆ ಮಾಡಿ ತುಚ್ಛವಾಗಿ ಮಾತನಾಡಿದ್ದುರು ಎಂದು ಮಗ ದೂರಿನಲ್ಲಿ ತಿಳಿಸಿದ್ದಾರೆ.
`ಹುಬ್ಬಳ್ಳಿಯ ಈರಬಸಪ್ಪ ವಾಲಿಕಾರ ಹಾಗೂ ಧಾರವಾಡದ ಚಂದ್ರಶೇಖರ ಪೂಜಾರ ತುಂಬಾ ತೊಂದರೆ ಕೊಡುತ್ತಿದ್ದಾರೆ. ಅವರಿಗೆ ಹಣವನ್ನು ಬಡ್ಡಿ ಸಮೇತ ಮರಳಿಸಿದ್ದೇನೆ. ಆದರೂ ಸುಳ್ಳು ಲೆಕ್ಕ ಹೇಳಿ ಹಿಂಸೆ ಮಾಡುತ್ತಿದ್ದಾರೆ ಎಂದು ನನಗೆ ಬೇರೆ ಗತಿ ಇಲ್ಲ' ಎಂದು ಅವರು ಮರಣ ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗಿದೆ. ನೇಮಕಾತಿ ವಿಚಾರ ಹಣದ ವ್ಯವಹಾರ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net