

ಶ್ರೀಧರ ಅಡಿ ಗೋಕರ್ಣ
ಗೋಕರ್ಣದಿಂದ ಅಘನಾಶಿನಿ ಗ್ರಾಮದವರೆಗಿನ ಹಾಲಕ್ಕಿ ಒಕ್ಕಲಿಗರ 12 ಸೀಮೆಗಳಲ್ಲಿ ವಾರ್ಷಿಕವಾಗಿ ನಡೆಯುವ ಸುಗ್ಗಿ ಹಬ್ಬವನ್ನು ಕಳೆದ ಬಾರಿಯಂತೆ ಈ ವರ್ಷವೂ ಕರೊನಾ ಮಹಾಮಾರಿ ನುಂಗಿ ಹಾಕಿದೆ.
ಚೈತ್ರ ಶುದ್ಧ ಚತುರ್ದಶಿ ಭಾನುವಾರ (ಏ. 25) ಅನಂಗ ಚತುರ್ದಶಿಯಿಂದ ಸುಗ್ಗಿ ಹಬ್ಬ ವಿಧ್ಯುಕ್ತವಾಗಿ ಪ್ರಾರಂಭವಾಗಬೇಕಿತ್ತು. ಒಂದು ವಾರ ಪರ್ಯಂತ ಹಾಲಕ್ಕಿ ಒಕ್ಕಲಿಗರ ವಿವಿಧ ತಂಡಗಳ ಸುಗ್ಗಿ ಕುಣಿತದಿಂದಾಗಿ ಈ ಭಾಗದಲ್ಲಿ ಗುಮಟೆ, ತಮಟೆ, ತಾಳ, ಕುಂಚ ಮತ್ತು ಸುಗ್ಗಿ ಮಕ್ಕಳ ಗೆಜ್ಜೆ ನಾದ ಎಲ್ಲೆಡೆ ಕೇಳಿ ಬರಬೇಕಿತ್ತು. ಆದರೆ, ಕರೊನಾ ವ್ಯಾಧಿಯಿಂದಾಗಿ ಸತತ ಎರಡನೆ ವರ್ಷ ಸುಗ್ಗಿ ಹಬ್ಬಕ್ಕೆ ಭಂಗ ಬಂದಿದೆ. ಉಳಿದೆಡೆಗಳಲ್ಲಿ ಹೋಳಿ ಮತ್ತು ಸುಗ್ಗಿ ಫಾಲ್ಗುಣದಲ್ಲಿ ಆಚರಿಸಲ್ಪಡುತ್ತದೆ. ಆದರೆ, ಗೋಕರ್ಣದ 12 ಹಾಲಕ್ಕಿ ಸೀಮೆಗಳಲ್ಲಿ ಮಾತ್ರ ಸುಗ್ಗಿ ಹಬ್ಬ ಪುರಾಣೋಕ್ತವಾದ ರೀತಿಯಲ್ಲಿ ಚೈತ್ರ ಶುದ್ಧದ ಅನಂಗ (ಕಾಮದೇವ) ಚತುರ್ದಶಿಯಂದು ಕಾಮ ದಹನದಿಂದ ಪ್ರಾರಂಭವಾಗಿ ಒಂದು ವಾರ ಕಾಲ ನಡೆಸಲ್ಪಡುತ್ತದೆ.
ಧಾರ್ವಿುಕ ಕಾರ್ಯ: ಸುಗ್ಗಿ ಹಬ್ಬ ಈ ಭಾಗದಲ್ಲಿ ಜಾನಪದ ಉತ್ಸವ ಮಾತ್ರವಲ್ಲ. ಇದನ್ನೊಂದು ಧಾರ್ವಿುಕ ವ್ರತಾಚರಣೆ ರೀತಿಯಲ್ಲಿ ಕೈಗೊಳ್ಳುವುದು ವಿಶೇಷ. ಸುಗ್ಗಿ ಕಟ್ಟಿದ ವ್ರತಧಾರಿಗಳು ಅನ್ಯಾಹಾರ ಮಾಡುವಂತಿಲ್ಲ. ಎಲ್ಲ ಚಟಗಳು ರ್ವ್ಯಜ ಸುಗ್ಗಿ ವ್ರತಧಾರಿ ಮನೆಯಿಂದ ಪ್ರತ್ಯೇಕ ಉಳಿದು ಇದನ್ನು ಆಚರಿಸಬೇಕು. ಪರಶಿವ ಕಾಮದೇವನನ್ನು ದಹಿಸಿದ ಎನ್ನುವ ಹಿನ್ನೆಲೆಯಲ್ಲಿ ಸುಗ್ಗಿ ಪ್ರಾರಂಭ ಮತ್ತು ಕಾಮ ದಹನ ಮಹಾಗಣಪತಿ ಸನ್ನಿಧಿಯಲ್ಲಿ ಮಹಾಬಲೇಶ್ವರನ ಉಪಸ್ಥಿತಿಯಲ್ಲಿ ಆಗಮೋಕ್ತ ಮಂತ್ರ, ತಂತ್ರಗಳೊಂದಿಗೆ ನಡೆಯುವುದು ಸುಗ್ಗಿಗೆ ಪರಂಪರೆಯಿಂದ ಧಾರ್ವಿುಕ ಮಹತ್ವವನ್ನು ತಂದಿದೆ. ಪ್ರಾರಂಭದ ಮೂರು ದಿನ ಕಾಮೋತ್ಸವ, ದಮನೋತ್ಸವ ಮತ್ತು ಪೌರ್ಣಿಮೋತ್ಸವ ನಿಮಿತ್ತ ಮಹಾಬಲೇಶ್ವರ ಮೂರ್ತಿಯ ಪುರ ಪರ್ಯಟನ ಹಮ್ಮಿಕೊಳ್ಳಲಾಗುತ್ತದೆ. ಈ ವೇಳೆ ಮಹಾಬಲೇಶ್ವರ ಉತ್ಸವದ ಹಿಂದೆ ಸುಗ್ಗಿ ವೃತ ಧಾರಿಗಳು ಸಾಗುವ ಮೂಲಕ ಗೋಕರ್ಣದಲ್ಲಿ ಮಾತ್ರ ಜಾನಪದ ಎನ್ನಲಾಗುವ ಸುಗ್ಗಿಗೆ ಧಾರ್ವಿುಕತೆಯ ಪ್ರಭಾವಳಿ ತೊಡಿಸಲಾಗಿದೆ. ಗೋಕರ್ಣದಲ್ಲಿನ ಸುಗ್ಗಿ ಹಬ್ಬದ ವಿವಿಧ ಆಚರಣೆಗಳನ್ನು ಉಳಿದೆಡೆ ಕಾಣಲಾಗದು. ಹೀಗಾಗಿ ಇಲ್ಲಿನ ಸುಗ್ಗಿಗೆ ಪ್ರತ್ಯೇಕವಾದ ಹೆಗ್ಗಳಿಕೆಯಿದೆ.
ಮಂದಿರ ಪ್ರಧಾನ: ಇದೊಂದು ಮಂದಿರ ಪ್ರಧಾನ ಉತ್ಸವ. ಸುಗ್ಗಿಯ ಪ್ರಾರಂಭದ ಕಾರ್ಯಕ್ರಮಗಳು ಮಹಾಬಲೇಶ್ವರ ಮತ್ತು ಮಹಾಗಣಪತಿ ಸನ್ನಿಧಾನದಲ್ಲಿ ನಡೆಯುತ್ತವೆ. ಇವೆರಡೂ ಮಂದಿರ ಕರ್ಫ್ಯೂ ಹಿನ್ನೆಲೆಯಲ್ಲಿ ಭಕ್ತರಿಗೆ ಮುಕ್ತವಾಗಿಲ್ಲ. ಜೊತೆಗೆ ಸುಗ್ಗಿಯನ್ನು ಈಗಿರುವ ಸರ್ಕಾರಿ ನಿಯಮಗಳನ್ನು ಅನುಸರಿಸಿ ನಿಯಮಿತ ಜನರೊಂದಿಗೆ ಆಚರಿಸುವುದು ಕಷ್ಟ. ಸುಗ್ಗಿಯ ಕೊನೇ ಎರಡು ದಿನ ನಡೆಯುವ ರಾತ್ರಿ ವೇಳೆಯ ಹಗರಣ ಮತ್ತು ಮಾರನೇ ದಿನ ಮಧ್ಯಾಹ್ನ ನಡೆಯುವ ಬೂದಿ ಸಂಪೋ›ಕ್ಷಣೆಯಲ್ಲಿ ಸಾವಿರಾರು ಜನ ಭಾಗಿಗಳಾಗುತ್ತಾರೆ. ಈ ಎಲ್ಲ ಕಾರಣಗಳಿಂದ ಮಹಾಬಲೇಶ್ವರ ಮಂದಿರ ಆಡಳಿತ ಮಂಡಳಿ ಸಾರ್ವಜನಿಕರ ಪ್ರವೇಶಕ್ಕೆ ಮಂದಿರದಲ್ಲಿ ನಿರ್ಬಂಧವಿದೆ. ಸದ್ಯದ ಪರಿಸ್ಥಿತಿಯಲ್ಲಿ ಎಂದಿನ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಸುಗ್ಗಿ ಆಚರಿಸಲು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಉತ್ಸವ ಕೈಬಿಡಲು ಸೂಚಿಸಿದೆ ಎಂದು ಆಡಳಿತಾಧಿಕಾರಿ ಜಿ.ಕೆ. ಹೆಗಡೆ ತಿಳಿಸಿದ್ದಾರೆ.
ಹೀಗಾಗಿ ಗೋಕರ್ಣ ಭಾಗದ ಸರ್ವ ಸಮಾಜದವರೂ ವಿಜೃಂಭಣೆಯಿಂದ ಆಚರಿಸುತ್ತಿದ್ದ ಸುಗ್ಗಿ ಸಂಭ್ರಮವನ್ನು ಈ ವರ್ಷ ಸಹ ಕೊವಿಡ್-19 ನುಂಗಿ ಹಾಕಿ ಸಾರ್ವಜನಿಕರ ನಿರಾಸೆಗೆ ಕಾರಣವಾಗಿದೆ.