ಸುಗ್ಗಿ ಸಂಭ್ರಮಕ್ಕೆ ಇಂದು ತೆರೆ

9KWR1
Published on

ವಿಜಯವಾಣಿ ಸುದ್ದಿಜಾಲ ಕಾರವಾರ

ನಗರದಲ್ಲಿ ಕರಡಿಗಳ ಹಾವಳಿ ಹೆಚ್ಚಿದೆ. ಬೀದಿಗಳಲ್ಲಿ ಓಡಾಡಲಾರಂಭಿಸಿವೆ!!

ಹಾಗೆಂದು ಯಾರೂ ಭಯ ಪಡಬೇಕಿಲ್ಲ. ಅವು ನಿಜವಾದ ಕರಡಿಗಳಲ್ಲ, ಕರಡಿ ವೇಷಧಾರಿಗಳು. ಹೋಳಿ ಹುಣ್ಣಿಮೆ ಅಂಗವಾಗಿ ನಗರದಲ್ಲಿ ಸುಗ್ಗಿ ತಂಡಗಳ ಸಂಚಾರ ರಂಗು ಮೂಡಿಸುತ್ತಿದೆ. ಸುಗ್ಗಿ ತಂಡದ ಜತೆಗೆ ಹಾಗೂ ಪ್ರತ್ಯೇಕವಾಗಿ ವಿವಿಧ ವೇಷಧಾರಿಗಳು ಹಾಗೂ ದೇವರ ವೇಷಧಾರಿಗಳು ಓಡಾಟ ನಡೆಸುತ್ತಿದ್ದಾರೆ.

ಸುಗ್ಗಿ ಸೊಬಗು: ಹಾಲಕ್ಕಿ ಒಕ್ಕಲಿಗ, ಅಂಬಿಗ, ಕೋಮಾರಪಂತ, ಗುನಗಿ ಹೀಗೆ ವಿವಿಧ ಸಮುದಾಯಗಳ ಸುಗ್ಗಿ ಪಂಗಡಗಳು ನಾಲ್ಕು ದಿನಗಳಿಂದ ಓಡಾಟ ನಡೆಸಿವೆ. ತಲೆಯ ಮೇಲೆ ಸುಂದರ ಬೆಂಡು, ಬಣ್ಣದ ಕಾಗದದಿಂದ ಮಾಡಿದ ಕಿರೀಟ, ಕೈಯ್ಯಲ್ಲಿ ಕೋಲು ಹಿಡಿದು, ಕಾಲಿಗೆ ಚಪ್ಪಲಿಯನ್ನೂ ಹಾಕದೇ ತಮ್ಮ ಸಮುದಾಯದವರ ಮನೆಗೆ ತೆರಳಿ ಸುಗ್ಗಿ ಕುಣಿತ ಪ್ರದರ್ಶಿಸುತ್ತಿವೆ.

ಊರಿನ ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಇದನ್ನು ವ್ರತದಂತೆ ಆಚರಿಸಿಕೊಂಡು ಬರುತ್ತಿದ್ದಾರೆ. ಸುಗ್ಗಿ ಪುಗುಡಿ ಕಟ್ಟಿದ ವ್ಯಕ್ತಿ ಮನೆಯಲ್ಲಿ ಊಟ ಮಾಡುವುದಿಲ್ಲ. ತಂಡದೊಟ್ಟಿಗೆ ಬರಿಗಾಲಲ್ಲಿ ನಿತ್ಯ ಹತ್ತಾರು ಕಿ.ಮೀ.ವರೆಗೆ ನೃತ್ಯ ಮಾಡುತ್ತಾನೆ. ಹೋಳಿ ಹುಣ್ಣಿಮೆಯ ದಿನ ಪೂಜೆ ಸಲ್ಲಿಸಿ ಪುಗುಡಿ ತೆಗೆಯಲಾಗುತ್ತದೆ. ಆಚರಣೆಯಿಂದ ಊರಿನಲ್ಲಿ ರೊಗ ಹರಡುವುದಿಲ್ಲ ಎಂಬ ನಂಬಿಕೆ ಜನರದ್ದು. ಬಿಣಗಾದ ಹಾಲಕ್ಕಿ ಒಕ್ಕಲಿಗರು ತಹಸಿಲ್ದಾರ್ ಕಚೇರಿ, ಪೊಲೀಸ್ ಠಾಣೆಗಳಿಗೂ ತೆರಳಿ ಸುಗ್ಗಿ ಪ್ರದರ್ಶಿಸುವ ಸಂಪ್ರದಾಯ ಸಾಕಷ್ಟು ವರ್ಷಗಳಿಂದ ಇದೆ. ಕಚೇರಿಯಿಂದಲೇ ಅವರಿಗೆ ಭಕ್ಷೀಸು ಅರ್ಪಿಸಲಾಗುತ್ತದೆ. ಅಮದಳ್ಳಿ, ತೋಡೂರು ಭಾಗದ ಹಾಲಕ್ಕಿ ಒಕ್ಕಲಿಗರ ಪುಗುಡಿ ಅತಿ ಸುಂದರವಾಗಿರುತ್ತದೆ. ಕದ್ರಾದಿಂದ ಹೊರಡುವ ಹೀರಾ ಮೇಳ ಕಾರವಾರದವರೆಗೂ ಆಯ್ದ ಮನೆಗಳಿಗೆ ಬಂದು ಹೋಗಿದೆ. ಅದರಲ್ಲಿ ವ್ಯಕ್ತಿಯೊಬ್ಬ ಹರಿತವಾದ ಖಡ್ಗ ಹಿಡಿದು ಮನೆಯ ಎದುರು ಗಿರಗಿರನೆ ತಿರುಗಿಸಿ ನೀಡುವ ಪ್ರದರ್ಶನ ಮೈ ಝುೂಂ ಎನಿಸುತ್ತದೆ.

ನಾಗೂರಿನ ಮರಾಠಿ ಸುಗ್ಗಿ: ಕುಮಟಾ ತಾಲೂಕಿನ ನಾಗೂರು ಗ್ರಾಮದ ಸುಗ್ಗಿ ತಂಡವು ಮೂರು ದಿನಗಳಿಂದ ವಿವಿಧೆಡೆ ಸುಗ್ಗಿ ನೃತ್ಯ ಪ್ರದರ್ಶಿಸಿ ಗಮನ ಸೆಳೆಯುತ್ತಿದೆ. ಪ್ರತಿವರ್ಷ 45ಕ್ಕೂ ಹೆಚ್ಚು ಮಂದಿಯಿಂದ ಕೂಡಿದ ಎರಡು ತಂಡಗಳು

ನಾಗೂರು, ಬ್ರಹ್ಮೂರು, ಕಮ್ಮಿಕೇರಿ, ಕಬಗಾಲ್: ಗ್ರಾಮಗಳ ಮನೆಗಳಿಗೆ ತೆರಳಿ ಸುಗ್ಗಿ ಕುಣಿತ ವನ್ನು ಪ್ರದರ್ಶಿಸುವುದು ರೂಢಿಯಲ್ಲಿದೆ. ‘ನಮ್ಮ ಸುಗ್ಗಿ ಆಚರಣೆ ಸಂಪ್ರದಾಯಕ್ಕೆ ಶತಮಾನಗಳ ಇತಿಹಾಸವಿದ್ದು, ಪೂರ್ವಜರಿಂದ ಬಂದಿರುವ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದೇವೆ. ಸುತ್ತಲಿನ ಸಂತೆಗದ್ದೆ, ಕಡಕೋಡ, ಹೆಗ್ಗಲೆ, ಯಲವಳ್ಳಿ ಮುಂತಾದ ಗ್ರಾಮಗಳಿಗೂ ಕಾಲ್ನಡಿಗೆಯಲ್ಲೇ ಸಂಚರಿಸುತ್ತೇವೆ ಎನ್ನುತ್ತಾರೆ ಸುಗ್ಗಿ ತಂಡದ ಮಂಜುನಾಥ ಮರಾಠಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net