

* ಗರುಡ ದೇವರಿಗೆ ಪ್ರತಿ ದಿನ ಪೂಜೆ
* ನಿಂತಿರುವ ಬಂಗಿಯಲ್ಲೆ ಲಕ್ಷ್ಮೀ ನರಸಿಂಹಸ್ವಾಮಿ ಸ್ವಾಮಿ ಪ್ರತಿಷ್ಠಾಪನೆ
* ಗಿಳಿಯ ರೂಪದಲ್ಲಿ ಭಗವಂತ ದರ್ಶನ
ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ
ದೇಶದಲ್ಲಿ ಗ್ರಾಮೀಣ ಭಾಗದ ಒಂದೊಂದು ಹಳ್ಳಿಗಳಿಗೂ ತನ್ನದೆ ಆದ ವೈಶಿಷ್ಟ್ಯವಿದೆ. ಅಂಥದೇ ಒಂದು ಹಳ್ಳಿ ಮಾಗಡಿಯಿಂದ 41 ಕಿ. ಮೀ. ದೂರದ ಸುಗ್ಗನಹಳ್ಳಿ. ಒಂದು ಕಾಲದಲ್ಲಿ ಶುಕಪುರಿ ಎಂದು ಇದನ್ನು ಕರೆಯಲಾಗುತ್ತಿತ್ತು. ಆದರೆ ಕಾಲಕ್ರಮೇಣ ಸುಗ್ಗನಹಳ್ಳಿಯಾಗಿದೆ.
ವೇದ ವ್ಯಾಸರ ಪುತ್ರ ಶುಕ ಮಹರ್ಷಿಗಳು ತಮ್ಮ ಶಿಷ್ಯರೊಂದಿಗೆ ಲೋಕ ಕಲ್ಯಾಣಾರ್ಥಕವಾಗಿ ಧರ್ಮ ಪ್ರಚಾರಕ್ಕೆ ಈ ಸ್ಥಳಕ್ಕೆ ಬಂದು ಸ್ಥಳದ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಬದರಿ ವೃಕ್ಷದ ಕೆಳಗೆ ತಪಸ್ಸು ಮಾಡಿದರಂತೆ. ಭಗವಂತ ಗಿಳಿಯ ರೂಪದಲ್ಲಿ ದರ್ಶನ ಕೊಟ್ಟ ಎಂಬ ಪ್ರತೀತಿಯಿಂದ ಈ ಸ್ಥಳವನ್ನು ಶುಕಪುರಿಯಾಯಿತು ಅವರಿಗೆ ಶುಕ ಮಹರ್ಷಿ ಎಂಬ ಹೆಸರು ಬಂತು ಎಂಬ ಕಥೆಯಿದೆ.
ಶುಕಮಹರ್ಷಿಗಳು ತಮಗೆ ದರ್ಶನ ನೀಡಿದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯನ್ನು ನಿಂತಿರುವ ಭಂಗಿಯಲ್ಲೆ ಸ್ಥಾಪಿಸಿದ್ದಾರೆ. ರಾಜ್ಯದ ಎಲ್ಲ ನರಸಿಂಹಸ್ವಾಮಿ ಕುಳಿತಿರುವ ಭಂಗಿಯಲ್ಲಿ ದರ್ಶನ ನೀಡಿದರೆ ಸುಗ್ಗನಹಳ್ಳಿ ಲಕ್ಷ್ಮೀ ನರಸಿಂಹಸ್ವಾಮಿ ಸ್ವಾಮಿ ನಿಂತಿರುವ ಭಂಗಿಯಲ್ಲಿ ದರ್ಶನ ನೀಡುತ್ತಾನೆ. ಅದೇ ಮಹತ್ವ ಸಾರುವ ಗರುಡ ದೇವರಿದ್ದು, ಈ ದೇವರಿಗೆ ನರಸಿಂಹಸ್ವಾಮಿಯಂತೆ ಹೆಚ್ಚು ಮಹತ್ವ ನೀಡಿ ಪ್ರತಿ ದಿನ ಪೂಜೆ ಮಾಡುವುದು ವಿಶೇಷ. ಹಿಂದುಗಳಲ್ಲದೆ ಮುಸ್ಲಿಮರು ಕೂಡ ಸಂತಾನ ಭಾಗ್ಯಕ್ಕೆ ಇಲ್ಲಿ ಹರಕೆ ಹೊರುತ್ತಾರೆ. 800 ವರ್ಷದ ಹಿಂದೆ ದೇವಾಲಯ ನಿರ್ಮಿಸಲಾಗಿದೆ ಎನ್ನಲಾಗಿದೆ.
ಗ್ರಾಮದಲ್ಲಿ ಆಂಜನೇಯ ಸ್ವಾಮಿ, ಗಣಪತಿ, ಶನೈಶ್ವರ, ಓಣಿ ಮಾರಮ್ಮ, ದೊಡ್ಡಮ್ಮ, ಚಿಕ್ಕಮ್ಮ ದೇವಾಲಯಗಳು, ಪಶು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗ್ರಂಥಾಲಯಗಳು ಪ್ರಮುಖವಾಗಿವೆ. ಪ್ರತಿ ವರ್ಷ ಮಾರ್ಚ್‌ನಲ್ಲಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯುತ್ತದೆ. ಗರುಡ ಪಕ್ಷಿ ಬಂದು ರಥದ ಮೇಲೆ ಪ್ರದಕ್ಷಿಣೆ ಹಾಕಿದ ಬಳಿಕವೇ ಬ್ರಹ್ಮರಥೋತ್ಸವ ನಡೆಯುವುದು ವಿಶೇಷ. ಪ್ರವಾಸಿಗರು ಜಾತ್ರಾ ಸಮಯದಲ್ಲಿ ಉಳಿಯಲು ಧಾರ್ಮಿಕ ದತ್ತಿ ಇಲಾಖೆಯ ಅತಿಥಿಗೃಹ ಮತ್ತು ಸಮುದಾಯ ಭವನ ನಿರ್ಮಿಸಿದೆ.
ಗ್ರಾಮದ ಬಳಿ ಮೂಲ ದೇವರಾದ ಕಂಬದ ನರಸಿಂಹಸ್ವಾಮಿ ದೇವಾಲಯವಿದ್ದು ಇದು ಕೂಡ ಪ್ರಸಿದ್ಧಿಹೊಂದಿದೆ. ಇಲ್ಲಿನ ಕಂಬದ ನರಸಿಂಹಸ್ವಾಮಿ ದಿನೆದಿನೇ ಬೆಳೆಯುತ್ತಿದೆ ಎಂದು ಸ್ಥಳೀಯರ ನಂಬಿದ್ದಾರೆ. ಭಕ್ತ ಪ್ರಹ್ಲ್ಲಾದ ಮಹಾರಾಜರು ಕೂಡ ಇಲ್ಲಿನ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ ದರ್ಶನ ಪಡೆದಿದ್ದಾರೆ ಎಂಬ ಪುರಾಣದ ಮಹತ್ವ ಇಲ್ಲಿನ ಜನರ ನಂಬಿಕೆಯ ಭಾಗವಾಗಿ ಉಳಿದುಕೊಂಡಿದೆ. ಗ್ರಾಮದ ಬಳಿ ಸುಮಾರು 6 ಎಕರೆ ವಿಸ್ತೀರ್ಣದಲ್ಲಿ ಚೋಳರ ಕಾಲದಲ್ಲಿ ಕೆರೆ ನಿರ್ಮಿಸಲಾಗಿದ್ದು, ಈ ನೀರಿನಿಂದ ಕೆಂಕೆರೆ ಪಾಳ್ಯ, ಕೆಂಕೆರೆ, ಸುಗ್ಗನಹಳ್ಳಿಯ ರೈತರು 30 ಎಕರೆಗಳಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಗ್ರಾಮದ ಸುತ್ತಮುತ್ತ 4 ಪುರಾತನ ಕಾಲದ ಕಲ್ಯಾಣಿಗಳಿದ್ದು, ಅವುಗಳನ್ನು ಪ್ರಸಿದ್ಧಿಪಡಿಸಿದ್ದು ಇದರಿಂದರ ಅಂತರ್ಜಲ ವೃದ್ಧಿಯಾಗಿ ಈ ಗ್ರಾಮಕ್ಕೆ ನೀರಿಗೆ ಬರ ಇಲ್ಲದಂತಾಗಿದೆ.
ಗ್ರಾಮದಲ್ಲಿ 254 ಮನೆಗಳಿದ್ದು, 1028 ಮಂದಿ ಇದ್ದಾರೆ. ಎಲ್ಲ ಸಮುದಾಯದವರು ಗ್ರಾಮದಲ್ಲಿ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದು, ಬಹುತೇಕ ಎಲ್ಲರೂ ವ್ಯವಸಾಯವನ್ನು ನಂಬಿದ್ದಾರೆ. ಗ್ರಾಮದಲ್ಲಿ ಶಿಕ್ಷಕರು, ಪೊಲೀಸ್, ಕೆಎಸ್‌ಆರ್‌ಟಿಸಿ ನೌಕರರು, ಸೈನಿಕ, ವಕೀಲರು ಸೇರಿ 38ಕ್ಕೂ ಹೆಚ್ಚು ಮಂದಿ ಸರ್ಕಾರಿ ಕೆಲಸಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸುಗ್ಗನಹಳ್ಳಿ ಇತಿಹಾಸ ಪ್ರಸಿದ್ಧ ಗ್ರಾಮವಾಗಿದೆ. ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ಇರುವುದರಿಂದ ಪ್ರಸಿದ್ಧಿ ಹೊಂದಿದ್ದು, ಶುಕಮಹರ್ಷಿ ತಪಸ್ಸು ಮಾಡಿದ್ದರಿಂದ ಊರಿಗೆ ಶುಕಪುರಿ ಎಂದೂ ಹೆಸರಿತ್ತು. ಕಾಲ ಕ್ರಮೇಣ ಸುಗ್ಗನಹಳ್ಳಿಯಾಗಿದೆ.ಕೃಷ್ಣಮೂರ್ತಿ, ಗ್ರಾಮಸ್ಥಗ್ರಾಮದಲ್ಲಿ ಗರುಡ ದೇವರ ಹೆಸರು ಇಟ್ಟುಕೊಂಡಿರುವರೇ ಹೆಚ್ಚು. ತಿರುಪತಿ ವೆಂಕಟೇಶನಿಗೆ ಮದುವೆ ಮಾಡಿಸಿದವರು ಶುಕಮಹರ್ಷಿಗಳು, ತಿರುಪತಿಯ ದೇವಾಲಯ ಹುಂಡಿಯ ಬಳಿ ಶುಕಮಹರ್ಷಿಗಳ ಚಿತ್ರ ಬಿಡಿಸಲಾಗಿದೆ. ಶುಕ ಎಂದರೆ ಗಿಳಿ. ಶುಕ ಮುನಿಗಳೆಂದರೆ ಗಿಳಿ ಮೂತಿ ಉಳ್ಳವರು. ಮಾಂಡವ್ಯ ಮಹರ್ಷಿ- ಶುಕಮುನಿಗಳು ಸಮಕಾಲೀನರು. ಪಾಪಣ್ಣ ಸ್ಥಳೀಯರು ತಾಲೂಕು ವಕೀಲರ ಸಂಘದ ಅಧ್ಯಕ್ಷ