31ರ ನಂತರ ಕಬ್ಬು ಅರೆಯುವಿಕೆ ಆರಂಭ

17-kkr1(7-24
Published on

ಕಿಕ್ಕೇರಿ: ಸಮೀಪದ ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವಿಕೆಯ ಆರಂಭ ಹಿನ್ನೆಲೆ ಕಾರ್ಖಾನೆ ಹಿರಿಯ ಉಪಾಧ್ಯಕ್ಷ ವಿ.ಜೆ.ರವಿ ದಂಪತಿ ಬುಧವಾರ ಶೃಂಗೇರಿ ಶಾರದಾಪೀಠದ ವಿದ್ಯಾಶಂಕರ ಶರ್ಮ ನೇತೃತ್ವದಲ್ಲಿ ದುರ್ಗಾಹೋಮ, ಗಣಹೋಮ ನಡೆಸಿ, ಟ್ರೇಲರ್‌ಗೆ ಅಗ್ರ ಪೂಜೆ ಸಲ್ಲಿಸಿದರು.


ಕಾರ್ಖಾನೆ ಹಿರಿಯ ಉಪಾಧ್ಯಕ್ಷ ವಿ.ಜೆ.ರವಿ ಮಾತನಾಡಿ, ಕೇನ್ ಟ್ರೇಲರ್‌ಗೆ ಪೂಜೆ ಸಲ್ಲಿಸಲಾಗಿದೆ. ಕಳೆದ ವಾರ(ಜು.12) ಬಾಯ್ಲರ್‌ಗೆ ಆಗ್ನಿಸ್ಪರ್ಶ ಮಾಡಲಾಗಿದ್ದು, ಜು.31ರ ನಂತರ ವಿಧ್ಯುಕ್ತವಾಗಿ ಕಬ್ಬು ಅರೆಯಲು ಸಕಲ ಸಿದ್ಧತೆ ಮಾಡಿಕೊಂಡಿದೆ. 5 ಕೋಟಿ ರೂ. ಮುಂಗಡವಾಗಿ 250 ಕಬ್ಬು ಕಟಾವು ಕಾರ್ಮಿಕ ತಂಡಕ್ಕೆ ನೀಡಿದ್ದು, ಜು.27ರ ನಂತರ ಕರೆತರಲಾಗುವುದು. ಪ್ರಸಕ್ತವಾಗಿ 8ಲಕ್ಷ ಟನ್ ಕಬ್ಬು ಅರೆಯುವ ಗುರಿ ಇದೆ. 4.5ಲಕ್ಷ ಟನ್ ಕಬ್ಬು ಮಾತ್ರ ಲಭ್ಯವಿದೆ. ಕಬ್ಬಿನ ಕೊರತೆ ನೀಗಿಸಲು ಮತ್ತಷ್ಟು ರೈತರು ಕಬ್ಬು ಬೆಳೆ ಬೆಳೆಯುವ ಜತೆಗೆ ಇರುವಷ್ಟು ಪ್ರದೇಶದಲ್ಲಿ ಹೆಚ್ಚು ಕಬ್ಬಿನ ಇಳುವರಿ ಪಡೆಯಲು ಉತ್ತಮ ತಳಿಯ ಬಿತ್ತನೆ ಬೀಜದೊಂದಿಗೆ ಸುಧಾರಿತ ವೈಜ್ಞಾನಿಕ ಪದ್ಧತಿ ಬೇಸಾಯಕ್ಕೆ ಮುಂದಾಗಿ, ಕಾರ್ಖಾನೆ ಸಿಒ 517 ಬೀಜ ನೀಡುತ್ತಿದೆ ಎಂದರು.


ಕಾರ್ಖಾನೆಗೆ 18 ಸಾವಿರ ಎಕರೆ ಕಬ್ಬು ಅವಶ್ಯವಿದ್ದು ತಾಲೂಕಿನಲ್ಲಿ ಕೇವಲ 13.5 ಸಾವಿರ ಎಕರೆಯಲ್ಲಿ ಮಾತ್ರ ಕಬ್ಬು ಬೆಳೆ ಇದೆ. 5 ಸಾವಿರ ಎಕರೆ ಕಬ್ಬಿನ ಕೊರತೆ ಕಾಡುತ್ತಿದೆ. ಕಳೆದ ಸಾಲಿನಲ್ಲಿ ಬರಗಾಲವಾಗಿ ಕೇವಲ 5.87ಲಕ್ಷ ಟನ್ ಕಬ್ಬು ನುರಿದಿದೆ. ಎಲ್ಲ ಕಾರ್ಖಾನೆಗಳು ಆರಂಭವಾಗುವುದರಿಂದ ರೈತರು ಹೆಚ್ಚು ಕಬ್ಬು ಬೆಳೆದು ಸರಬರಾಜು ಮಾಡಿ. ಕಳೆದ ಸಾಲಿನಲ್ಲಿ ಟನ್‌ಗೆ 2,944 ರೂ. ಸಕಾಲಕ್ಕೆ ನೀಡಿದೆ. ಈ ಬಾರಿ 3,154 ರೂ. ಎಫ್‌ಆರ್‌ಪಿ ದರ ನಿಗದಿಯಾಗಿದ್ದು, ಮೊದಲ ಕಂತಿನಲ್ಲಿ 3 ಸಾವಿರ ರೂ. 21ದಿನದೊಳಗೆ ನೀಡಲಾಗುವುದು. ಉಳಿಕೆ ನಿಗದಿತ ಹಣವನ್ನು ಎರಡನೇ ಕಂತಿನಲ್ಲಿ ನೀಡಲಾಗುವುದು. ರೈತರ ಆರ್ಥಿಕ ಬಲವರ್ಧನೆಗೆ ಶಕ್ತಿ ಕೇಂದ್ರವಾಗಿ ಕಾರ್ಖಾನೆ ರೂಪಿತವಾಗಲು ರೈತರ ಸಹಕಾರ ಬೇಕಿದೆ ಎಂದರು.


ಬೇಸಿಗೆ ಬೆಳೆಗೆ ಉತ್ತೇಜಿಸಲು ಪ್ರೋತ್ಸಾಹಧನ, ಬೀಜದ ಸಾಗಣೆ ವೆಚ್ಚ ನೀಡಲಾಗುವುದು. ಜನವರಿಯಲ್ಲಿ ಉಚಿತ ಬೀಜ ಬಿತ್ತನೆ, ಪ್ರೋತ್ಸಾಹಕವಾಗಿ ಬಡ್ಡಿರಹಿತ ಶೇ.50ರಲ್ಲಿ ಲಘು ಪೋಷಕಾಂಶ, ತರಗು ಕೊಳೆಯಲು ಶಿಲೀಂಧ್ರ ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಕಬ್ಬು ವಿಭಾಗದ ಹಿರಿಯ ವ್ಯವಸ್ಥಾಪಕ ಕೆ.ಬಾಬುರಾಜ್ ಮಾತನಾಡಿ, ಶುಂಠಿ ಬೇಸಾಯದಂತೆ ಕಬ್ಬು ಬೆಳೆಯಿರಿ. ತಾಲೂಕಿನ 106 ಕೇಂದ್ರಗಳಲ್ಲಿ ವೈಜ್ಞಾನಿಕ, ಹನಿ ನೀರಾವರಿ ಪದ್ಧತಿಯಲ್ಲಿ ಬೇಸಾಯ ಮಾಡಲು ಕಬ್ಬಿನ ತಾಕು ನಿರ್ಮಿಸಿದೆ. ರೈತರಿಗೆ ಅನುಕೂಲವಾಗಲು 5 ಆಧುನಿಕ ಸುಧಾರಿತ ತಳಿಗಾಗಿ ವಿವಿಧ ಕೃಷಿ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.


ಕಾನೂನು ಸಲಹೆಗಾರ ವಕೀಲ ರವಿಶಂಕರ್, ಕಾರ್ಖಾನೆಯ ಅಧಿಕಾರಿಗಳಾದ ಪಿ.ಎಸ್.ಮೇಯನ್, ಕೆ.ಬಾಬುರಾಜ್, ಅಶೋಕ್‌ಕುಮಾರ್, ಕೆ.ಜಿ.ಮೋಹನ್, ಆರ್.ಇ.ಕುಮಾರ್, ನವೀನ್, ರವಿಚಂದ್ರನ್, ರೈತ ಮುಖಂಡರಾದ ಕುಮಾರ್, ಕಾಯಿ ಮಂಜೇಗೌಡ, ವಡಕಹಳ್ಳಿ ಮಂಜೇಗೌಡ, ರಾಮೇಗೌಡ, ಕೃಷ್ಣೇಗೌಡ, ಕಬ್ಬು ಬೆಳೆಗಾರ ಸಂಘ ಸದಸ್ಯರು, ಲಾರಿ, ಟ್ರಾೃಕ್ಟರ್ ಮಾಲೀಕರ ಸಂಘ, ಕಾರ್ಮಿಕ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net