ಹಳಿಯಾಳದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ-ಕೆಲವು ಅಂಗಡಿ ಮುಂಗಟ್ಟುಗಳು ಬಂದ್‌

sugarcane-strike-at-Haliyal
Published on

ಹಳಿಯಾಳ: ಕಳೆದ ಸಾಲಿನ ಬಾಕಿ ಬಿಲ್ ಪಾವತಿ, ಕಟಾವು ಮತ್ತು ಸಾಗಾಟ ವೆಚ್ಚ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಬುಧವಾರ ಕರೆ ನೀಡಿದ್ದ ಹಳಿಯಾಳ ಬಂದ್‌ಗೆ ಮಿಶ್ರ ಪ್ರತಿಕ್ರಿಯೇ ವ್ಯಕ್ತವಾಗಿದೆ.

ಬೆಳಗ್ಗೆಯಿಂದ ಕೆಲವು ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಮಾಡಲಾಗಿದ್ದರೇ. ಕೆಲವರು ರೈತರ ಪ್ರತಿಭಟನಾ ಮೇರವಣಿಗೆ ಆರಂಭವಾಗುತ್ತಿದ್ದಂತೆ ಅಂಗಡಿ ಬಂದ್ ಮಾಡಿ ಬೆಂಬಲ ಸೂಚಿಸಿದರು. ಕೆಲವರು ಪ್ರತಿಭಟನೆಯಲ್ಲೂ ಪಾಲ್ಗೊಂಡರು. ಪಟ್ಟಣದ ಮರಾಠಾ ಭವನದ ಬಳಿ ಸೇರಿದ ಕಬ್ಬು ಬೆಳೆಗಾರ ರೈತರು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಇಲ್ಲಿಂದ ಪ್ರತಿಭಟನಾ ಮೇರವಣಿಗೆ ಆರಂಭಿಸಿ ಬಸ್ ನಿಲ್ದಾಣ ರಸ್ತೆ, ಮಾರುಕಟ್ಟೆ ಮುಖ್ಯಬೀದಿ ಸೇರಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಇಲ್ಲಿಯ ಛತ್ರಪತಿ ಶಿವಾಜಿ ವೃತ್ತದಲ್ಲಿ ಸೇರಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ, ತಾಲೂಕಾಡಳಿತ ಹಾಗೂ ಉಕ ಜಿಲ್ಲಾಡಳಿತದ ವಿರುದ್ದ ಘೋಷಣೆ ಮೊಳಗಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ರೈತ ಮುಖಂಡ ಎನ್.ಎಸ್. ಜೀವೋಜಿ, ಸೆಪ್ಟಂಬರ್ ತಿಂಗಳಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಇಐಡಿ ಪ್ಯಾರಿ ಕಾರ್ಖಾನೆಗೆ ರೈತರ ಸಮಸ್ಯೆ ಬಗೆಹರಿಸಲು 15 ದಿನಗಳ ಗಡುವು ನೀಡಿದ್ದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಎಲ್ಲಿ ಹೋಗಿದ್ದಾರೆ, ಅವರನ್ನು ಸಂಪರ್ಕಿಸಲು ಎಷ್ಟೇ ಪ್ರಯತ್ನ ಪಟ್ಟರು ಅವರು ಸಂಪರ್ಕಕ್ಕೂ ಬರುತ್ತಿಲ್ಲ ಇವರ ನಡೆ ತೀರಾ ಸಂಶಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು. ಮಂಗಳವಾರದಿಂದ ರೈತರಿಗೆ ಇಂದಿನ ಪ್ರತಿಭಟನೆಯಲ್ಲಿ ಭಾಗಿಯಾಗದಂತೆ ಕೆಲವು ಜನಪ್ರತಿನಿಧಿಗಳಿಂದ ಬೆದರಿಕೆ ಕರೆಗಳು ಬಂದಿವೆ. ನೀವುಗಳು ರೈತರ ಪ್ರತಿಭಟನೆ ಹತ್ತಿಕ್ಕಲು ಎಷ್ಟೆ ಪ್ರಯತ್ನಿಸಿದರು, ನಾವು ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮುಂದುವರೆಸುತ್ತೇವೆ ಯಾವ ಸಂಕಷ್ಟ ಬಂದರು ಎದುರಿಸಲು ಸಿದ್ದ ಎಂದು ಜಿವೋಜಿ ಸ್ಪಷ್ಟಪಡಿಸಿದರು.


ರೈತರ ಪ್ರತಿಭಟನೆ ಹತ್ತಿಕ್ಕಲು, ಕಾರ್ಖಾನೆ ಪರವಾಗಿ ಕೆಲಸ ಮಾಡುತ್ತಿರುವ ಕಾಣದ ಕೈಗಳು ಕೆಲಸ ಮಾಡುತ್ತಿವೆ ಮುಂದಿನ ದಿನಗಳಲ್ಲಿ ಇವರಿಗೆ ತಕ್ಕ ಉತ್ತರ ನೀಡಲಿದ್ದೇವೆ ಎಂದ ಜಿವೋಜಿ ಕಾರ್ಖಾನೆ ಮತ್ತು ರೈತರ ದ್ವೀಪಕ್ಷಿಯ ಒಪ್ಪಂದವಾಗದೇ ಕಾರ್ಖಾನೆ ಆರಂಭ ಮಾಡಬಾರದು ಎಂದು ಆಗ್ರಹಿಸಿದರು.
ಕಲಘಟಗಿ ರೈತ ಮುಖಂಡ ನಿಜಗುಣಿ ಕೆಲಗೇರಿ ಮಾತನಾಡಿ ರೈತರು ನಿರಂತರ ಶೋಷಣೆಗೆ ಒಳಗಾಗುತ್ತಿದ್ದಾರೆ. ತಾಲೂಕಾಡಳಿತ, ಜಿಲ್ಲಾಡಳಿತ ಇಷ್ಟು ದಿನ ಮಲಗಿದೆಯೇ ಕಾರ್ಖಾನೆ ಪ್ರಾರಂಭವಾಗಲಿದೆ ಆದರೇ ರೈತರ ಸಮಸ್ಯೆಗೆ ಪರಿಹಾರ ಒದಗಿಸುವಲ್ಲಿ ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರ ಸಂಘದ ಹಳಿಯಾಳ ತಾಲೂಕಾ ಅಧ್ಯಕ್ಷ ಶಂಕರ ಕಾಜಗಾರ ಮಾತನಾಡಿ ರೈತರ ಬೆಡಿಕೆ ಈಡೇರಿಸಿದ ಬಳಿಕವೇ ಕಾರ್ಖಾನೆ ಆರಂಭಿಸಬೇಕು. ಒಂದುವೇಳೆ ರೈತರನ್ನು ಕಡೆಗಣಿಸಿ ಕಾರ್ಖಾನೆ ಆರಂಭಿಸಿದರೇ ಮುಂದೆ ಆಗುವ ಅನಾಹುತಗಳಿಗೆ ತಾಲೂಕಾಡಳಿತ ಮತ್ತು ಜಿಲ್ಲಾಡಳಿತವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ರಸ್ತೆ ತಡೆ ಬಳಿಕ ಇಲ್ಲಿಯ ಆಡಳಿತ ಸೌಧಕ್ಕೆ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್‌ ಜಿ.ಕೆ. ರತ್ನಾಕರ್ ಅವರಿಗೆ ಸಲ್ಲಿಸಿದರು.


ಮನವಿಯಲ್ಲಿ :

ಕಳೆದ ವರ್ಷದ ಹೆಚ್ಚುವರಿ ಪ್ರತಿ ಟನ್ ಕಬ್ಬಿನ 150 ರೂ. ಹಣ ಹಾಗೂ 2016-17ನೇ ಸಾಲಿನ ಪ್ರತಿ ಟನ್ ಕಬ್ಬಿನ ಹೆಚ್ಚುವರಿ 305 ರೂ. ಬಾಕಿ ಹಣ ಪಾವತಿಸಬೇಕು. ಕಟಾವು ಮತ್ತು ಸಾಗಾಣೆ(ಎಚ್ &ಟಿ) 893 ರೂ. ದರ ಪಡೆಯುತ್ತಿರುವ ಪ್ಯಾರಿ ಕಾರ್ಖಾನೆ ಕೂಡಲೇ ಹೆಚ್ಚಿನ ದರ ಆಕರಣೆ ನಿಲ್ಲಿಸಿ ದರ ಪರಿಷ್ಕರಣೆ ಮಾಡಬೇಕು, ಕಾರ್ಖಾನೆ ಮತ್ತು ರೈತರ ದ್ವೀಪಕ್ಷಿಯ ಒಪ್ಪಂದವಾಗದೇ ಕಾರ್ಖಾನೆ ಆರಂಭಿಸಬಾರದು ಎನ್ನುವುದು ರೈತರ ಪ್ರಮುಖ ಬೇಡಿಕೆಯಾಗಿದೆ.
ಕಬ್ಬು ಸಾಗಾಟ ಮಾಡುವುದಿಲ್ಲ :

ಅಳ್ನಾವರ, ಹಳಿಯಾಳ, ಕಲಘಟಗಿ, ದಾಂಡೇಲಿ, ಜೋಯಿಡಾ, ಜೋಯಿಡಾ ಭಾಗದ ಕಬ್ಬು ಬೆಳೆಗಾರ ರೈತರು ಭಾಗವಹಿಸಿದ್ದ ಬುಧವಾರದ ರೈತರ ಪ್ರತಿಭಟನೆಯಲ್ಲಿ ಕಾರ್ಖಾನೆ ರೈತರ ಬೇಡಿಕೆ ಈಡೇರಿಸುವವರೆಗೂ ಕಾರ್ಖಾನೆ ಆರಂಭಿಸಲು ಜಿಲ್ಲಾಡಳಿತ, ತಾಲೂಕಾಡಳಿತ ಅನುಮತಿ ನೀಡಬಾರದು ಜೊತೆಗೆ ರೈತರು ಕರ್ಖಾನೆಗೆ ಕಬ್ಬು ಕಳುಹಿಸಬಾರದು ಎನ್ನುವ ನಿರ್ಣಯ ಪ್ರಕಟಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಅಶೋಕ ಮೇಟಿ, ಎಮ್ ವಿ ಘಾಡಿ, ಸಾತೂರಿ ಗೋಡಿಮನಿ, ಪರಶುರಾಮ ಯತ್ತಿನಗುಡ್ಡ, ಬಿಎನ್ ರಮೇಶ, ಪುಂಡ್ಲಿಕ್ ಗೊಡಿಮನಿ, ರಾಮದಾಸ ಬೆಳಗಾಂವಕರ, ನಿಜಲಿಂಗಪ್ಪ ಎಸ್, ಗಿರಿಶ ಟೋಸುರ, ಗಣೇಶ ಅಂಬೋಳಿ, ಹೂಳವಪ್ಪ ಬಳಿಗೇರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net