ನಾಡಗೀತೆ ವಿವಾದ ಬಗೆಹರಿಸಲು ಒತ್ತಾಯ

K and C
Published on

ಬೆಂಗಳೂರು: ರಾಷ್ಟ್ರಕವಿ ಕುವೆಂಪು ವಿರಚಿತ ‘ಜೈ ಭಾರತ ಜನನಿಯ ತನುಜಾತೆ’ ನಾಡಗೀತೆಯ ವಿವಾದವನ್ನು ಶೀಘ್ರ ಬಗೆಹರಿಸಬೇಕೆಂದು ಒತ್ತಾಯಿಸಿರುವ ಕರ್ನಾಟಕ ಸುಗಮ ಸಂಗೀತ ಪರಿಷತ್ತು, ತಜ್ಞರ ಸಮಿತಿ ರಚಿಸುವಂತೆ ಸರ್ಕಾರವನ್ನು ಆಗ್ರಹಿಸಿದೆ.

ಈ ಸಂಬಂಧ ಕಳೆದ 2 ದಶಕಗಳಿಂದ ಸುಗಮ ಸಂಗೀತ ಪರಿಷತ್ತು ಸರ್ಕಾರಕ್ಕೆ ಮನವಿ ಸಲ್ಲಿಸುತ್ತ ಬಂದಿದ್ದು, 2022ರಲ್ಲಿ ಸರ್ಕಾರವು ಸಮಿತಿ ರಚಿಸಿ ಅದರ ಶಿಫಾರಸು ಮೇರೆಗೆ ನಾಡಗೀತೆಗೆ ಧಾಟಿ ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಆದರೆ, ಈ ಧಾಟಿ ಬಗ್ಗೆ ಹಲವು ಸಾಹಿತಿ, ಕಲಾವಿದರಲ್ಲಿ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣವು ಹೈಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ನಡೆಯುತ್ತಿದೆ.

ಇತ್ತೀಚಿನ ಪತ್ರಿಕೆಗಳಲ್ಲಿನ ವರದಿಯನ್ವಯ ಸರ್ಕಾರದ ಪರ ವಕೀಲರು ಹಾಗೂ ಅರ್ಜಿದಾರರ ಸಮ್ಮುಖದಲ್ಲಿ ನಾಡಗೀತೆಗೆ ಸಂಬಂಧಿಸಿದಂತೆ ಸೃಷ್ಟಿಯಾಗಿರುವ ವಿವಾದ ಕುರಿತು ಅರ್ಜಿದಾರರನ್ನೂ ಒಳಗೊಂಡಂತೆ ತಜ್ಞರ ಸಮಿತಿ ಸಭೆ ಕರೆದು ಚರ್ಚಿಸಿ, ಸಮಸ್ಯೆ ಬಗೆಹರಿಸಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯವ್ಯಕ್ತವಾಗಿದೆ. ಈ ಅಂಶಗಳನ್ನು ಪರಿಗಣಿಸಿ ಸರ್ಕಾರ ಕೂಡಲೇ ತಜ್ಞರ ಸಮಿತಿ ರಚಿಸಿ ಈ ವಿವಾದಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪರಿಷತ್ತು ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಆಗ್ರಹಿಸಿದ್ದಾರೆ.

ಕುವೆಂಪು ಜನ್ಮ ಶತಮಾನೋತ್ಸವ ಪ್ರಯುಕ್ತ ಅಂದಿನ ಸರ್ಕಾರ 2003ರ ಡಿ. 29ರಿಂದ ಒಂದು ವರ್ಷ ಕಾಲ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಈ ಸಂಬಂಧ 2003ರ ಜನವರಿ 7ರಂದು ಕುವೆಂಪು ವಿರಚಿತ ‘ಜೈ ಭಾರತ ಜನನಿಯ ತನುಜಾತೆ’ ಕವನವನ್ನು ನಾಡಗೀತೆಯಾಗಿ ಘೋಷಿಸಿ ಆದೇಶ ಹೊರಡಿಸಿತ್ತು. ನಂತರ ನಾಡಗೀತೆಯ ದಾಟಿಗೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾಗಿದ್ದು, ಈವರೆಗೂ ಮುಂದುವರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net