ಮತ ಮಾರಾಟ ಅಪಾಯದ ಮುನ್ಸೂಚನೆ - ಸುಧಾಮ್ ದಾಸ್

14-04-rama-ambedkar 2
Published on

ರಾಮನಗರ: ಅಂದಿನ ಸಮಾಜ ವ್ಯವಸ್ಥೆಯಲ್ಲಿ ಬಾಲ್ಯದಲ್ಲೇ ಅಪಮಾನ, ಅವಹೇಳನ, ಶೋಷಣೆಗೆ ಒಳಗಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಾವು ಕಲಿತ ವಿದ್ಯೆಯಿಂದಲೇ ವಿಶ್ವ ರತ್ನವಾಗಿ ಬದಲಾದರು, ಅವರು ಬೆಳೆದು ಬಂದ ಹಾದಿ ಅನುಕರಣೀಯ ಎಂದು ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅಭಿಪ್ರಾಯಪಟ್ಟರು.

ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ರಾಮನಗರ ನಗರಸಭೆ ವತಿಯಿಂದ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಲಿಯುವ ವಯಸ್ಸಿನಲ್ಲಿ ಸಾಕಷ್ಟು ಶೋಷಣೆ, ಅಪಮಾನಕ್ಕೆ ಒಳಗಾದ ಅಂಬೇಡ್ಕರ್ ಅವರು ತಾವು ಕಲಿತ ವಿದ್ಯೆಯಿಂದಾಗಿ ರಾಷ್ಟ್ರರತ್ನ ಸ್ಥಾನಕ್ಕೆ ಏರಿದರು, ಶಿಕ್ಷಣ ಮಾತ್ರದಿಂದಲೇ ಎಲ್ಲವೂ ಸಾಧ್ಯ ಎಂದು ನಂಬಿದ್ದ ಅವರು ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಎಂಬ ಮಂತ್ರವನ್ನು ಸಮಾಜಕ್ಕೆ ನೀಡಿದರು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸುಧಾಮ್ ದಾಸ್ ಮಾತನಾಡಿ, ಶೋಷಿತ ಸಮುದಾಯಕ್ಕೆ ಸಂವಿಧಾನದ ಮೂಲಕ ಸಮಾನತೆ ಒದಗಿಸಿದವರು ಬಾಬಾ ಸಾಹೇಬರು. 12ನೇ ಶತಮಾನದಲ್ಲಿ ಬಸವಣ್ಣ ಅವರಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲಘಟ್ಟದಲ್ಲಿ ಸಮಾಜದ ಬದಲಾವಣೆಗೆ ಬಂದಿದ್ದ ಪ್ರತಿರೋಧಗಳ ಬಗ್ಗೆ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅರಿವಿತ್ತು, ಆ ಕಾರಣಕ್ಕಾಗಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಯಾವುದೇ ಕಳಂಕ ಬಾರದಂತೆ ನೋಡಿಕೊಂಡರು, ತಮ್ಮ ಅನುಭವ ಮತ್ತು ಅಧ್ಯಯನದ ಮೂಲಕ ಶ್ರೇಷ್ಠ ಬದುಕನ್ನು ಕಂಡರು.

ಅಂದು ಸಂವಿಧಾನದ ಮೂಲಕ ನಮಗೆ ಅವರು ನೀಡಿದ ಮತದಾನದ ಹಕ್ಕನ್ನು ಇಂದು ಮಾರಾಟಕ್ಕೆ ಇಡಲಾಗಿದೆ. ಇದು ಆತಂಕಕಾರಿ ಬೆಳವಣಿಗೆ. ಮತದಾನ ಮಾರಾಟ ಆರಂಭವಾದ ದಿನದಿಂದಲೇ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಪೆಟ್ಟು ಬೀಳು ಆರಂಭಿಸಿದೆ. ಮುಂದೊಂದು ದಿನ ನಾವು ಮತ್ತೆ ಬುಡಕಟ್ಟು ಸಂಸ್ಕೃತಿಯತ್ತ ಸಾಗುತ್ತೇವೆ ಎಂದು ಎಚ್ಚರಿಕೆ ನಿಡಿದರು.

ನಿವೃತ್ತ ಐಎಫ್ ಎಸ್ ಅಧಿಕಾರಿ ರಾಜು, ಈ ರೀತಿಯ ಸಮಾರಂಭದ ಮೂಲಕ ಕೆಲವೊಂದು ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಳ್ಳುವುದು ಉತ್ತಮ. ವಿದ್ಯೆಯಿಂದ ನೌಕರಿ ಪಡೆದ ವಿದ್ಯಾವಂತರು ತಮ್ಮ ಸಮುದಾಯವದ ಏಳಿಗೆಗೆ ದುಡಿಯಬೇಕು, ಹಳ್ಳಿಗಳಿಗೆ ತೆರಳಬೇಕು. ಅವರು ಸಮಾಜ ಸುಧಾರಣೆಗೆ ಯತ್ನಿಸದಿದ್ದರೆ ವಿದ್ಯೆಗೆ ಅರ್ಥವಿಲ್ಲ ಎನ್ನುವುದು ಅಂಬೇಡ್ಕರ್ ಅವರ ಅಭಿಪ್ರಾಯವಾಗಿತ್ತು ಎಂದರು.

ಮೈಸೂರಿನ ಮಹಾರಾಜ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಬಿಪಿನ್ ನಾಗರಾಜು ಅವರು ಮಾತನಾಡಿ, ಡಾ ಬಿ.ಆರ್ ಅಂಬೇಡ್ಕರ್ ಅವರನ್ನು ನಾವು ಆಚರಣೆ ಮಾಡುತ್ತಿದ್ದೇವೆ, ಆದರೆ ಅನುಕರಣೆ ಮಾಡುತ್ತಿಲ್ಲ. ಹಿಂದೂ ಬಿಲ್ ಕೋಡ್ ಮೂಲಕ ಮಹಿಳೆಯರಿಗೆ ಸವಲತ್ತು ನೀಡಿ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅವರು ಕಾರಣಕರ್ತರಾಗಿದ್ದಾರೆ. ಅಂಬೇಡ್ಕರ್ ಅವರನ್ನು ನಾವು ಪುಸ್ತಕದಲ್ಲಿ ಹುಡುಕುವ ಕೆಲಸ ಮಾಡಬೇಕಿದೆ. ದೇಶದ ಶೇ.85ರಷ್ಟು ಶೋಷಿತರ ಪರವಾಗಿ ದನಿ ಎತ್ತಿದವರು ಅಂಬೇಡ್ಕರ್ ಅವರು, ಆದರೆ ಒಂದು ಅವರನ್ನು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತ ಮಾಡುತ್ತಿರುವುದು ದುರಂತ ಎಂದು ಬೇಸರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net