

ಬೆಳ್ತಂಗಡಿ: ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಎರಡನೇ ಬಾರಿ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕು ಆಸ್ಪತ್ರೆಗೆ ಈ ಹಿಂದೆ ಭೇಟಿ ನೀಡಿದಾಗ ಡಯಾಲಿಸಿಸ್ ಕೇಂದ್ರದ 12 ಯಂತ್ರಗಳ ಪೈಕಿ 1 ಯಂತ್ರ ಕೆಟ್ಟು ಹೋಗಿದ್ದು, ಇನ್ನೂ ರಿಪೇರಿ ಮಾಡದ ಬಗ್ಗೆ ಸದಸ್ಯರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಡಯಾಲಿಸಿಸ್ ಕೇಂದ್ರದ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರೆ ನವೆಂಬರ್ 22ರಂದು ಬೆಳ್ತಂಗಡಿಗೆ ಭೇಟಿ ನೀಡಲಿರುವ ಆರೋಗ್ಯ ಸಚಿವರ ಗಮನಕ್ಕೆ ತರಲಾಗುವುದು ಎಂದರು.
ಡಯಾಲಿಸಿಸ್ ಕೇಂದ್ರಕ್ಕೆ ಚಿಕಿತ್ಸೆಗಾಗಿ ಭೇಟಿ ನೀಡುವ ರೋಗಿಗಳು ಮಾಸ್ಕ್ ಧರಿಸದಿರುವ ಬಗ್ಗೆ ಸಿಬ್ಬಂದಿಗಳನ್ನು ಪ್ರಶ್ನಿಸಿ, ಇನ್ನೊಮ್ಮೆ ಈ ರೀತಿಯ ಬೇಜವಾಬ್ದಾರಿ ಕಂಡು ಬಂದರೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು. ಕಳೆದ ಭೇಟಿಯ ನಂತರ ಸ್ವಚ್ಛತೆಗೆ ಸಾಕಷ್ಟು ಗಮನ ಹರಿಸಿದ ಬಗ್ಗೆ ಸದಸ್ಯರು ಸಂತಸ ವ್ಯಕ್ತಪಡಿಸಿದರು.
ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಅಬ್ದುಲ್ ಕರೀಂ ಗೇರುಕಟ್ಟೆ, ಜಯರಾಂ ಮಲೆಕುಡಿಯ ಆಲಂಗಾರು, ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ನವೀನ್ ಗೌಡ ಸವಣಾಲು, ಪಿ.ಟಿ.ಸೆಬಾಸ್ಟಿಯನ್ ಕಳೆಂಜ, ಸವಿತಾ ಕೊರಗ ಅಟ್ರಿಂಜೆ, ವೀರೇಂದ್ರ ಕುಮಾರ್ ಜೈನ್ ಅಳದಂಗಡಿ, ಸ್ಟೀವನ್ ಮೋನಿಸ್, ವೆಂಕಣ್ಣ ಕೊಯ್ಯೂರು, ವನಿತಾ ಸಾಲ್ಯನ್, ರಶೀದ್ ಕಕ್ಕಿಂಜೆ ಉಪಸ್ಥಿತರಿದ್ದರು.
ಹದಗೆಟ್ಟ ಸ್ಕ್ಯಾನಿಂಗ್ ಯಂತ್ರ
ದಿನನಿತ್ಯ ರೋಗಿಗಳನ್ನು ಪರೀಕ್ಷೆ ಮಾಡದಿರುವ ಬಗ್ಗೆ ರೋಗಿಗಳು ದೂರಿದರು. ಈ ಬಗ್ಗೆ ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್ ಅವರ ಗಮನಕ್ಕೆ ತಂದು, ರೋಗಿಗಳ ಜೀವನದಲ್ಲಿ ಚೆಲ್ಲಾಟವಾಡುವ ವೈದ್ಯಾಧಿಕಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪುರುಷರ, ಮಹಿಳೆಯರ, ಮಕ್ಕಳ ಐಸಿಯು ಖಾಲಿಯಾಗಿದ್ದರೂ ರೋಗಿಗಳನ್ನು ಮಂಗಳೂರಿನ ಆಸ್ಪತ್ರೆಗೆ ಕಳುಹಿಸುವ ಬಗ್ಗೆ ಆಡಳಿತ ವೈದ್ಯಾಧಿಕಾರಿಗಳ ಗಮನ ಸೆಳೆಯಲಾಯಿತು. ತಾಲೂಕು ಆಸ್ಪತ್ರೆಯಲ್ಲಿ ಕಳೆದ ಒಂದು ವರ್ಷದಿಂದ ಸ್ಕ್ಯಾನಿಂಗ್ ಯಂತ್ರ ಹದಗೆಟ್ಟಿದರೂ ಅದರ ಬಗ್ಗೆ ಗಮನ ಹರಿಸದ ಬಗ್ಗೆ ಆಡಳಿತ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸದಸ್ಯರು ಇಂತಹ ನಿರ್ಲಕ್ಷ್ಯ ಸಲ್ಲದು ಎಂದರು.