ಸಂತ ಕನಕದಾಸರು ಪ್ರಭಾವಶಾಲಿ ದಾರ್ಶನಿಕ -- ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಲಿಮಾರು ಶ್ರೀ ಆಶೀರ್ವಚನ

mng-nov19-KALKURA KANAKA (1)
Published on

ಮಂಗಳೂರು: ಕನಕದಾಸರಿಗೆ ಉಡುಪಿಯಲ್ಲಿ ಪ್ರತಿ ದಿನವೂ ಪೂಜೆ ಸಲ್ಲುತ್ತದೆ. ಅವರ ಕೀರ್ತನೆಗಳು ಸಮಾಜವನ್ನು ಬಡಿದೆಬ್ಬಿಸುವಂತಿದೆ. ಅವರೊಬ್ಬರು ಪ್ರಭಾವಶಶಾಲಿ ದಾರ್ಶನಿಕ ಎಂದು ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ಶ್ರೀಪಾದಂಗಳವರು ನುಡಿದರು.

ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕದ್ರಿ ಕಂಬಳ ಮಂಜು ಪ್ರಾಸಾದ ವಿಶ್ವೇಶ ತೀರ್ಥ ವೇದಿಕೆ, ವಾದಿರಾಜ ಮಂಟಪದಲ್ಲಿ ಮಂಗಳವಾರ ಜರುಗಿದ ಗೋಪೂಜೆ-ಭಜನಾ ಸಂಕೀರ್ತನೆ ಹಾಗೂ ಕನಕದಾಸ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಕನಕದಾಸರ ಸಾಹಿತ್ಯ ವಿಧ್ವಾಂಸರಿಗೂ ಬಿಡಿಸಲಾರದಷ್ಟು ಕಗ್ಗಂಟು. ಆದರೆ ಮಕ್ಕಳಿಗೆ ಸರಳ ರೀತಿಯಲ್ಲಿ ಸಾಹಿತ್ಯವನ್ನು ನೀಡಿದ್ದಾರೆ. ಅವರ ಸಾಹಿತ್ಯದಲ್ಲಿ ಮೇದಾರ್ಥ, ಪುರಣಾರ್ಥಗಳು, ಅನುಭವಕ್ಕೆ ತಟ್ಟುವ, ಪ್ರಭಾವಗೊಳಿಸುವ ಶಕ್ತಿ ಇದೆ. ಸಮಾಜವನ್ನು ದೇವರತ್ತ ಕರೆದೊಯ್ಯಲು ಸಂಕಲ್ಪ ಮಾಡಿದರು. ಸಾಧ್ಯವಾಗದೇ ಇದ್ದಾಗ ಶ್ರೀ ಕೃಷ್ಣನನ್ನೇ ಸಮಾಜದ ಕಡೆಗೆ ತಿರುಗಿಸಿದ ಶಕ್ತಿ ಕನಕದಾಸರದ್ದು ಎಂದರು.

ದಾಸ ಸಾಹಿತ್ಯ ಪ್ರಚಾರಕ ರಾಮಕೃಷ್ಣ ಕಾಟುಕುಕ್ಕೆ ಅವರಿಗೆ ಕನಕದಾಸ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿ ದಾಸ ಸಾಹಿತ್ಯಕ್ಕೆ ಸಲ್ಲುತ್ತದೆ. ಭಜನಾ ಕ್ಷೇತ್ರದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಲು ಪ್ರೇರಣೆ ಸಿಗಲಿದೆ ಎಂದರು.

ಬೆಟ್ಟಂಪಾಡಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ‘ಕನಕದಾಸರ ಜೀವನ ದರ್ಶನ ವಿಷಯದಲ್ಲಿ ಉಪನ್ಯಾಸ ನೀಡಿದರು. ನಾವು ಬದುಕಿನಲ್ಲಿ ಹಾದಿ ತಪ್ಪಿದಾಗ ತಿದ್ದುವ ಶಕ್ತಿ ಕನಕದಾಸರ ಕೀರ್ತನೆಗಳಲ್ಲಿ ಇವೆ. ಸಮಾಜದ ವಿಡಂಬಣೆ ಅವರ ಹಾಡುಗಳಲ್ಲಿವೆ. ಕನಕದಾಸರನ್ನು ಬದುಕಿನ ಸಹಯಾತ್ರಿಕರಾಗಿ ನೋಡಬೇಕು ಎಂದವರು ಹೇಳಿದರು.

ಕದ್ರಿ ವಾಸುದೇವ ಭಟ್, ರಾಮಕೃಷ್ಣ ರಾವ್, ಪ್ರಭಾಕಕರ ರಾವ್ ಪೇಜಾವರ, ಜನಾರ್ದನ ಹಂದೆ, ರಾಮಚಂದ್ರ ಭಟ್ ಎಲ್ಲೂರು, ವಿನೋದಾ ಕಲ್ಕೂರ ಮೊದಲಾದವರಿದ್ದರು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿದರು. ಪ್ರಾಂಶುಪಾಲ ದಯಾನಂದ ಕಟೀಲ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net