ಸೆಂಧೂರ ಮಾವು ದಿಢೀರ್ ಕುಸಿತ

Sendoora Mavu
Published on

* ಬೆಳೆಗಾರರು, ದಲ್ಲಾಳಿಗಳು ಆತಂಕ

*ಕೆಜಿಗೆ 5 ರೂ.ಗೆ ಮಾರಾಟ

* ಔಷಧ, ಕೂಲಿ ಖರ್ಚು ಸಿಗುತ್ತಿಲ್ಲ

ವಿಭೂತಿಕೆರೆ ಶಿವಲಿಂಗಯ್ಯರಾಮನಗರ

ಚನ್ನಪಟ್ಟಣ-ರಾಮನಗರ ಮಾವು ಮಾರುಕಟ್ಟೆಯಲ್ಲಿ ದಿಢೀರ್ ಸೆಂಧೂರ ಮಾವು ಕೆಜಿಗೆ 5 ರೂ. ನಂತೆ ಮಾರಾಟವಾಗಿ ಬೆಲೆ ಇಳಿಮುಖ ಕಂಡು ಬೆಳೆಗಾರರು, ದಲ್ಲಾಳಿಗಳನ್ನು ಆತಂಕ್ಕೀಡುಮಾಡಿದೆ.

ಜಿಲ್ಲೆಯಲ್ಲಿ ಪ್ರತಿಬಾರಿ ಹೆಚ್ಚಾಗಿ ಸೆಂಧೂರ ಮಾವು ರೈತರ ಕೈ ಸೇರುತ್ತದೆ. ಬಾದಾಮಿ, ರಸಪೂರಿ ಮಾವು ಈ ಬಾರಿ ಸಲಿಲ್ಲದಿದ್ದರೂ ಒಂದಷ್ಟು ಹೆಚ್ಚಿನ ಸೆಂಧೂರ ಸಲು ರೈತರ ಕೈಗೆ ಸಿಕ್ಕಿದೆ. ಆದರೆ, ಸೋಮವಾರ ಸೆಂಧೂರ ಕೆ.ಜಿ.ಗೆ 5 ರೂ.ನಂತೆ ಮಾರಾಟವಾಗಿದೆ. ಸಲು ಕಿತ್ತು ತಂದು ಮಾರುಕಟ್ಟೆಗೆ ಹಾಕುವ ಕೂಲಿಯೂ ಸಿಗುತ್ತಿಲ್ಲ ಎಂಬ ಅಳಲು ರೈತರದ್ದಾಗಿದೆ.

ಪ್ರಾರಂಭದಲ್ಲಿ ನೂರು ರೂ. ಗಡಿ ದಾಟಿದ್ದ ಬಾದಾಮಿ ಪ್ರಸ್ತುತ 16 ರಿಂದ 20ರೂ.ಗೆ ಬಂದಿದೆ. ನೂರರ ಅಂಚಿನಲ್ಲಿದ್ದ ಸೆಂ‘ಧೂರ ಕಳೆದ 15 ದಿನಗಳ ಹಿಂದೆ 40 ರಿಂದ 50ರೂ. ಇತ್ತು. ಕಳೆದ ನಾಲ್ಕೈದು ದಿನಗಳ ಹಿಂದೆ 25 ರಿಂದ 35 ರೂ. ಇತ್ತು. ಇಂದು 5 ರೂಪಾಯಿಗೂ ಕೇಳುವವರಿಲ್ಲದಂತಾಗಿದೆ. 100 ರೂ. ಗಡಿ ದಾಟಿದ್ದ ರಸಪೂರಿ ಮಾವು 18 ರಿಂದ 20 ರೂ.ಗೆ ಇಳಿದಿದೆ. ಜಿಲ್ಲೆಯ ರಾಮನಗರ ಮತ್ತು ಚನ್ನಪಟ್ಟಣ ತಾಲೂಕಿನಲ್ಲಿ ಅತೀ ಹೆಚ್ಚು ಮಾವು ರೈತರ ವಾಣಿಜ್ಯ ಬೆಳೆಯಾಗಿದೆ. ವಾತಾವರಣದ ಬದಲಾವಣೆ ಹೂ ವಿಳಂಬ ಹಿನ್ನೆಲೆಯಲ್ಲಿ ಮಾವು ಸಲು ಇಲ್ಲದೆ ರೈತ ನಷ್ಟದ ಹಾದಿ ತುಳಿದಿದ್ದಾನೆ.

ತೋತಾಪುರಿ ಎಫೆಕ್ಟ್:

ಆಂಧ್ರ, ತಮಿಳುನಾಡಿನಲ್ಲಿ ಹೆಚ್ಚಾಗಿ ತೋತಾಪುರಿ ಬೆಳೆಯಲಾಗುತ್ತದೆ. ಈಗಾಗಲೇ ಆ ಮಾವು ಮಾರುಕಟ್ಟೆ ಪ್ರವೇಶಿಸಿದೆ. ಕಾರ್ಖಾನೆಯವರಿಗೆ ತೋತಾಪುರಿ ಮಾವಿನಲ್ಲಿ ಹೆಚ್ಚು ಉತ್ಪನ್ನ ಸಿಗುವ ಕಾರಣದಿಂದ ಅದರ ಖರೀದಿಗೆ ಒಲವು ತೋರಿಸಿರುವುದರಿಂದ ಸೆಂಧೂರ ಮಾವು ಮಾರುಕಟ್ಟೆ ಬೆಲೆ ಕುಸಿಯಲು ಕಾರಣ ಎನ್ನುತ್ತಾರೆ ವರ್ತಕರು.

ಸೆಂಧೂರ ಮಾವು ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ತಮಿಳುನಾಡು ಮತ್ತಿತರ ಹೊರ ರಾಜ್ಯದಲ್ಲಿನ ಜ್ಯೂಸ್ ಕಾರ್ಖಾನೆಗಳಿಗೆ ಹೋಗುತ್ತದೆ. ಆದರೆ, ಅಲ್ಲಿನ ಕಾರ್ಖಾನೆಯವರು ಸೆಂಧೂರ ಮಾವು ಖರೀದಿಗೆ ಒಲವು ತೋರುತ್ತಿಲ್ಲ. ಇದರಿಂದ ವ್ಯಾಪಾರಿಗಳು ರೈತರಿಂದ ಸೆಂಧೂರ ಖರೀದಿಸುತ್ತಿಲ್ಲ. ಈ ಕಾರಣದಿಂದ ಬೆಲೆ ಇಳಿಮುಖ ಕಂಡಿದೆ ಎನ್ನುತ್ತಾರೆ ದಲ್ಲಾಳಿಗಳು.

ಬೇರೆ ಭಾಗದ ಮಾವು

ಪ್ರತೀ ವರ್ಷ ಫೆಬ್ರವರಿಯಲ್ಲೇ ಮಾವು ಮಾರುಕಟ್ಟೆ ಪ್ರಾರಂಭವಾಗಿ ಏಪ್ರಿಲ್ ಕೊನೆ ಅಥವಾ ಮೇ ಮೊದಲ ವಾರದಲ್ಲೇ ಜಿಲ್ಲೆಯ ಮಾವು ಕೊನೆಯಾಗುತ್ತಿತ್ತು. ಆದರೆ, ಈ ಸಲ ಎರಡು ತಿಂಗಳು ಫಸಲು ವಿಳಂಬ ಕಂಡಿರುವ ಕಾರಣ ಕೋಲಾರ, ಆಂಧ್ರ, ತಮಿಳುನಾಡು, ಶ್ರೀನಿವಾಸಪುರ ಮಾವು ಮಾರುಕಟ್ಟೆಗೆ ಪ್ರವೇಶಿಸಿದೆ. ಕಾರಣ ಜಿಲ್ಲೆಯ ಮಾವಿಗೆ ಕಾರ್ಖಾನೆಯವರು ಒಲವು ತೋರುತ್ತಿಲ್ಲ. ಇದು ದಿಢೀರ್ ಬೆಲೆ ಇಳಿಕೆ ಕಾಣುತ್ತಿದೆ ಎನ್ನಲಾಗಿದೆ.

ರೋಗದ ಹೊಡೆತ

ಒಂದೆಡೆ ಕಾಯಿಗಳು ಜೋನಿ ರೋಗದಿಂದ ಕಪ್ಪಾಗಿವೆ. ಜತೆಗೆ ಹೂಜಿ ನೊಣ ಕಾಯಿಗೆ ಮಾರಕವಾಗಿವೆ. ಅಲ್ಲದೆ ಕಳೆದ ವಾರದಿಂದಲೂ ಮಳೆ ಬರುತ್ತಿದ್ದು, ಕಾಯಿಗಳು ನೀರಾಗಿವೆ. ಈ ಕಾರಣದಿಂದಲೂ ಮಾರುಕಟ್ಟೆಯಲ್ಲಿ ದರ ಕುಸಿದಿದೆ ಎನ್ನುತ್ತಾರೆ ವರ್ತಕರು. ರಾಮನಗರ ಮತ್ತು ಚನ್ನಪಟ್ಟಣಗಳಲ್ಲಿ ಮಾವಿನ ಹಣ್ಣು ಮಾಡಿ ಮಾರಾಟ ಮಾಡುವವರು ಸ್ಥಳೀಯವಾಗಿ ಮಾವು ಕೊಂಡು ಹಣ್ಣು ಮಾಡಿ ಬೆಂಗಳೂರು, ಮೈಸೂರು ರಾಜ್ಯದ ಮತ್ತಿತರ ಕಡೆ ಮಾರಾಟ ಮಾಡುತ್ತಾರೆ. ಆದರೆ, ಈ ಬಾರಿ ಅವರೂ ಒಲವು ತೋರುತ್ತಿಲ್ಲ.

ಹೊರ ರಾಜ್ಯದ ಕಾರ್ಖಾನೆಯವರು ಕಾಯಿ ಕೊಳ್ಳಲು ಆಸಕ್ತಿ ವಹಿಸುತ್ತಿಲ್ಲ. ಒಂದೇ ಸಮನೆ ಮಳೆಯೂ ಸುರಿಯುತ್ತಿದೆ. ಕಾಯಿ ಕಳಿಸಬೇಡಿ ಎಂದು ಕಾರ್ಖಾನೆಯವರು ಹೇಳುತ್ತಿದ್ದಾರೆ. ಬೇರೆ ಬೇರೆ ಮಾರುಕಟ್ಟೆ ಕಡೆ ಕಾರ್ಖಾನೆಯವರು ಒಲವು ತೋರಿರುವುದರಿಂದ ಬೆಲೆ ಇಳಿಕೆ ಕಂಡಿದೆ. ಇದರಿಂದ ರೈತರು ನಾವು ಸಮಸ್ಯೆ ಎದುರಿಸುವಂತಾಗಿದೆ.ಅಸ್ಲಂಪಾಷ, ಮಾವು ಮಂಡಿ ವರ್ತಕರು, ರಾಮನಗರ.ಈ ಬಾರಿ ಬಾದಾಮಿ, ರಸಪೂರಿ ಫಸಲಿಲ್ಲ, ಒಂದಷ್ಟು ಸೆಂಧೂರ ಫಸಲಿತ್ತು. ಆದರೆ, ದಿಢೀರನೆ 5 ರೂ. ಗೆ ಬೆಲೆ ಕುಸಿದಿದೆ. ಜತೆಗೆ ಕಾಯಿ ಮಾರುಕಟ್ಟೆಗೆ ತರಬೇಡಿ ಎನ್ನುತ್ತಿದ್ದಾರೆ. ಗಿಡದಲ್ಲೇ ಕಾಯಿಗಳು ಉದುರುತ್ತಿವೆ. ಔಷಧ ಕೂಲಿ ಖರ್ಚು ಸಿಗದೆ ನಾವು ಪರಿತಪಿಸಬೇಕಿದೆ. ಇರುವ ಮಾವಿಗೆ ಒಂದಷ್ಟು ದರ ಸಿಕ್ಕಿದ್ದರೆ ರೈತರು ದಲ್ಲಾಳಿಗಳ ಬದುಕಿಗೆ ಒಂದಷ್ಟು ಬಲ ಸಿಗುತ್ತಿತ್ತು. ದರ ಇಳಿಕೆ ರೈತರಲ್ಲಿ ಕತ್ತಲು ಕವಿಯುವಂತೆ ಮಾಡಿದೆ. ಗೋಪಾಲನಾಯ್ಕ, ರೈತ, ದೇವರದೊಡ್ಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net