

ಸುಳ್ಯ: ಸುಳ್ಯಕ್ಕೆ ಹೊಸತಾಗಿ ಜಾರಿಯಾದ ನಗರ ಯೋಜನಾ ಪ್ರಾಧಿಕಾರ(ಸುಡಾ)ದ ವತಿಯಿಂದ ನಗರ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳ ಜತೆ ಸಮಾಲೋಚನಾ ಸಭೆ ನಗರ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅಧ್ಯಕ್ಷತೆ ವಹಿಸಿದ್ದರು. ನಗರದಲ್ಲಿ ಮಹಾಯೋಜನೆ ಅನುಷ್ಠಾನ ಕುರಿತು ಚರ್ಚೆ ನಡೆಯಿತು. ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತ ಮಾತನಾಡಿ, ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ನಗರ ಯೋಜನಾ ಪ್ರಾಧಿಕಾರ ಕೆಲಸ ಮಾಡಲಿದೆ. ಸುಳ್ಯ ನಗರಕ್ಕೆ ಸೂಕ್ತವಾಗುವ ಮತ್ತು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಹಾ ಯೋಜನೆ ಆಗಬೇಕು ಎಂಬ ಉದ್ದೇಶ ಇದೆ. ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಮಹಾಯೋಜನೆಯ ಕರಡು ಪ್ರತಿ ಪರಿಷ್ಕರಣೆ ಮಾಡಿ ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ಹೇಳಿದರು.
ಮೊದಲ ಹಂತದಲ್ಲಿ ಸುಳ್ಯ ನಗರದಲ್ಲಿ ಹಾಲಿ ಇರುವ ರಸ್ತೆಗಳ ಸರ್ವೇ ನಡೆಸಿ, ಗುರುತು ಮಾಡಿ ಅವುಗಳಿಗೆ ಐಡಿ ಸಂಖ್ಯೆ ನೀಡಿ, ಸಾರ್ವಜನಿಕ ಆಕ್ಷೇಪಣೆ ಸಲ್ಲಿಕೆಗೆ 30 ದಿನಗಳ ಕಾಲಾವಕಾಶ ನೀಡಿ ಹಾಲಿ ಇರುವ ಈ ಎಲ್ಲ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳೆಂದು ೋಷಿಸಲಾಗುವುದು. ಎರಡನೇ ಹಂತದಲ್ಲಿ ಮಹಾಯೋಜನೆ ಅನುಷ್ಠಾನ ಹಿನ್ನೆಲೆಯಲ್ಲಿ ಸುಳ್ಯ ನಗರಕ್ಕೆ ಸೂಕ್ತವಾಗುವ ನಿಟ್ಟಿನಲ್ಲಿ ಪರಿಷ್ಕರಣೆ ಮಾಡಿ ನಗರದ ರಸ್ತೆಗಳ ಅಗಲವನ್ನು 12 ಮೀಟರ್ 9 ಮೀಟರ್, 6 ಮೀಟರ್ ಎಂದು ಪರಿಷ್ಕರಿಸಲಾಗುವುದು ಎಂದು ಕೆ.ಎಂ.ಮುಸ್ತಫಾ ಹೇಳಿದರು.
ನಪಂ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ಧ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ನಪಂ ಸದಸ್ಯರಾದ ಎಂ.ವೆಂಕಪ್ಪ ಗೌಡ, ಕೆ.ಎಸ್.ಉಮ್ಮರ್, ಬಾಲಕೃಷ್ಣ ರೈ, ಧೀರಾ ಕ್ರಾಸ್ತಾ, ಸುಧಾಕರ ಕುರುಂಜಿಗುಡ್ಡೆ, ರಿಯಾಜ್ ಕಟ್ಟೆಕ್ಕಾರ್, ಶಿಲ್ಪಾ ಸುದೇವ್, ಸರೋಜಿನಿ ಪೆಲ್ತಡ್ಕ, ಶೀಲಾ ಅರುಣ ಕುರುಂಜಿ, ಸುಶೀಲಾ ಜಿನ್ನಪ್ಪ ಸಲಹೆ ಸೂಚನೆ ನೀಡಿದರು. ಸುಳ್ಯ ನಪಂ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್., ನಗರ ಯೋಜನಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್, ನಗರ ಯೋಜಕ ಫೈರೋಜ್ ಮತ್ತಿತರರಿದ್ದರು.
ಪ್ರತ್ಯೇಕ ನಿಯಮಾವಳಿ ರಚಿಸಲು ಮನವಿ
ಈ ಭಾಗದ ಅಭಿವೃದ್ಧಿ ನಡೆಸುವ ನಿಟ್ಟಿನಲ್ಲಿ ಕರಾವಳಿ ವಲಯಕ್ಕೆ ಪ್ರತ್ಯೇಕ ನಿಯಮಾವಳಿ ಮಾಡಬೇಕು ಎಂದು ದ.ಕ., ಉಡುಪಿ ಪ್ರಾಧಿಕಾರದ ಒಕ್ಕೂಟ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಮುಸ್ತಫಾ ತಿಳಿಸಿದರು. ಮಹಾಯೋಜನೆ ಅನುಷ್ಠಾನದ ಕುರಿತು ವಿವಿಧ ಸಂ ಸಂಸ್ಥೆಗಳು ಹಾಗು ಪ್ರಮುಖರ ಸಭೆ ನಡೆಸಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.