

ಕುರುಗೋಡು: ಬಳ್ಳಾರಿ-ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಮಾಡಲು ಆಗ್ರಹಿಸಿ ಎಸ್‌ಯುಸಿಐ ಕಮ್ಯೂನಿಸ್ಟ್ ಪಕ್ಷದ ಪದಾಧಿಕಾರಿಗಳು ಕೋಳೂರು ಕ್ರಾಸ್ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಬಳ್ಳಾರಿ ನಗರದಿಂದ ಸಿರುಗುಪ್ಪ ನಗರಕ್ಕೆ ಮಾರ್ಗ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 150/ಎ ರಸ್ತೆಯು ಹೆದಗೆಟ್ಟು ಹೋಗಿದೆ. ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಈ ಮಾರ್ಗದಲ್ಲಿ ಬರುವ ವಕ್ರಾಣಿ ಕ್ಯಾಂಪ್, ಲಕ್ಷ್ಮೀನಗರ ಕ್ಯಾಂಪ್, ಸೋಮಸಮುದ್ರ, ಕೋಳೂರು ಕ್ರಾಸ್, ಸಿಂದಿಗೇರಿ ಮತ್ತು ಬೈಲೂರು ಗ್ರಾಮಗಳ ಜನತೆ ಸಂಕಷ್ಟ ಪಡುವಂತಾಗಿದೆ ಎಂದು ಎಸ್‌ಯುಸಿಐ ಪಕ್ಷದ ಕಾರ್ಯದರ್ಶಿ ಎ.ದೇವದಾಸ್ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಯಲ್ಲಿ ಸಂಚಾರಿಸಲು ಭಯ ಪಡುವಂತಾಗಿದೆ. ರಸ್ತೆ ಸರಿಯಾಗಿ ನಿರ್ವಹಣೆ ಇಲ್ಲದೆ ಸಂಪೂರ್ಣ ಹಾಳಾಗಿದೆ. ದ್ವಿಚಕ್ರ ವಾಹನಗಳ ಸವಾರರು ರಸ್ತೆ ಹೆದಗೆಟ್ಟಿದರಿಂದ ಅಪಘಾತಗಳಾಗಿವೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಸಹಾಯಕ ಅಭಿಯಂತರ ಚೇತನ್ ಮಾತನಾಡಿ, ಮನವಿಯನ್ನು ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಜನವರಿ 15 ಒಳಗೆ ರಸ್ತೆ ದುರಸ್ತಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಪ್ರಮುಖರಾದ ಬಸಣ್ಣ, ನಿಂಗರಾಜ್, ಗೋಪಾಲ್, ಪಿ. ಬಸವರಾಜ್, ಸದಾನಂದ, ನಡವಳ ಈರಣ್ಣ ಇನ್ನಿತರರಿದ್ದರು.