ಸ್ವಾಮಿತ್ವ ಯೋಜನೆ ಯಶಸ್ವಿ ಜಾರಿ - ಡ್ರೋನ್ ಸರ್ವೇ ಬಹುತೇಕ ಪೂರ್ಣ

Survey
Published on

ಗಂಗಾಧರ್ ಬೈರಾಪಟ್ಟಣ ರಾಮನಗರ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ವಾಮಿತ್ವದಲ್ಲಿ ರಾಮನಗರ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿದ್ದು, ಈಗಾಗಲೇ ಜಿಲ್ಲೆಯ 806 ಗ್ರಾಮಗಳಲ್ಲಿ ಡ್ರೋನ್ ಸರ್ವೇ ಕಾರ್ಯ ಪೂರ್ಣಗೊಂಡಿದೆ.

ಗ್ರಾಮೀಣ ಭಾಗದ ಆಸ್ತಿಗಳಿಗೆ ಡಿಜಿಟಲ್ ರೂಪ ನೀಡುವ ಮೂಲಕ ಆಸ್ತಿ ಮಾಲೀಕತ್ವದ ಪುರಾವೆಗಳನ್ನು ನೀಡುವ ಉದ್ದೇಶದಿಂದ 2021ರ ಏಪ್ರಿಲ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸ್ವಾಮಿತ್ವ ಯೋಜನೆಗೆ ಚಾಲನೆ ನೀಡಿದರು. ಇದರ ಭಾಗವಾಗಿ ರಾಜ್ಯದಲ್ಲಿಯೂ ಸ್ವಾಮಿತ್ವ ಯೋಜನೆ ಪ್ರಗತಿಯಲ್ಲಿಯಲ್ಲಿದ್ದು, ರಾಮನಗರ ಉತ್ತಮ ಸಾಧನೆ ಮಾಡುವ ಮೂಲಕ ಡಿಸೆಂಬರ್ ಮೊದಲ ವಾರದ ಅಂತ್ಯಕ್ಕೆ 36866 ಆಸ್ತಿಗಳ ಪತ್ರಗಳನ್ನು ವಿತರಣೆ ಮಾಡಿದೆ.

ಏನಿದು ಸ್ವಾಮಿತ್ವ?

ಹಲವಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ವಾಸವಿದ್ದರೂ ಮನೆಗಳ ಮಾಲೀಕತ್ವದ ಹಕ್ಕು ಹೊಂದಿರದ ಗ್ರಾಮೀಣ ಭಾಗದ ವಾರಸುದಾರರಿಗೆ ಮನೆ ಹಾಗೂ ನಿವೇಶನಗಳ ನಾಲ್ಕು ದಿಕ್ಕಿನಲ್ಲೂ ಗಡಿ ನಿಗದಿಪಡಿಸಿ ಶಾಸನಬದ್ಧ ಮನೆ ಮಾಲೀಕತ್ವದ ಹಕ್ಕುಪತ್ರ ನೀಡುವುದೇ ಸ್ವಾಮಿತ್ವ ಯೋಜನೆಯಾಗಿದೆ. 2024ರ ವೇಳೆ ದೇಶಾದದ್ಯಂತ ಗ್ರಾಮೀಣ ಭಾರತದ ಪ್ರತಿ ಮನೆಗೂ ಈ ಯೋಜನೆ ತಲುಪಬೇಕು ಎನ್ನುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಯೋಜನೆಯನ್ನು ಘೋಷಣೆ ಮಾಡಿದ್ದರು.

ಬಹುತೇಕ ಪೂರ್ಣ

ಸ್ವಾಮಿತ್ವ ಯೋಜನೆಯು ಸರ್ವೇ ಆಫ್ ಇಂಡಿಯಾದ ಸಹಯೋಗದಲ್ಲಿ ನಡೆಯುತ್ತಿದೆ. ಇದು ಪ್ರತಿ ಗ್ರಾಮದಲ್ಲಿ ಡ್ರೋನ್ ಸರ್ವೇ ನಡೆಸಿ, ಆಸ್ತಿಗಳ ಫೋಟೋವನ್ನು ಸೆರೆ ಹಿಡಿಯುತ್ತದೆ. ನಂತರ ಚಿತ್ರಗಳನ್ನು ಸಂಸ್ಕರಿಸಿ, ಗುರುತಿಸಲಾದ ಆಸ್ತಿಗಳ ನಕಾಶೆಯನ್ನು ತಯಾರಿಸಲಾಗುತ್ತದೆ. ಜತೆಗೆ ಗ್ರಾಪಂಗಳಲ್ಲಿ ಇರುವ ದಾಖಲೆಗಳೊಂದಿಗೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ ಅಂತಹ ಆಸ್ತಿಗೆ ಸ್ವಾಮಿತ್ವ ಆಸ್ತಿಪತ್ರ ನೀಡಲಾಗುತ್ತದೆ. ಇಂತಹ ಕಾರ್ಯ ಜಿಲ್ಲೆಯಲ್ಲಿ ಯಶಸ್ವಿ ಆಗಿ ಸಾಗಿದೆ.

ಜಿಲ್ಲೆಯಲ್ಲಿ ಡ್ರೋನ್ ಸರ್ವೇಗೆ ಆಯ್ಕೆ ಮಾಡಿಕೊಂಡಿರುವ ಒಟ್ಟು 824 ಗ್ರಾಮಗಳಲ್ಲಿ ಈಗಾಗಲೇ 806 ಗ್ರಾಮಗಳಲ್ಲಿ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಇನ್ನು ದೊರೆತ ಚಿತ್ರಗಳ ಆಧಾರದಲ್ಲಿ ದಾಖಲೆಗಳ ಪರಿಶೀಲನೆ ಸೇರಿ ಇತರ ಕಾರ್ಯಗಳು ಜತೆ ಜತೆಯಾಗಿಯೇ ನಡೆಯುತ್ತಿದ್ದು, ಇದುವರೆಗೂ 709 ಗ್ರಾಮಗಳ ಡಿಜಿಟಲೀಕರಣವೂ ಪೂರ್ಣಗೊಂಡಿದೆ. ಅಷ್ಟೇ ಅಲ್ಲದೆ, 2 ಲಕ್ಷಕ್ಕೂ ಹೆಚ್ಚು ಆಸ್ತಿಗಳಿಗೆ ಸಂಬಂಧಿಸಿದ ಕರಡು ಆಸ್ತಿ ಪತ್ರಗಳನ್ನು ಸಹ ಸಿದ್ಧಪಡಿಲಾಗಿದ್ದು, 36 ಸಾವಿರ ಆಸ್ತಿಗಳಿಗೆ ಅಂತಿಮ ಸ್ವಾಮಿತ್ವ ಆಸ್ತಿಪತ್ರವೂ ಸಿದ್ಧಗೊಂಡಿವೆ.

ಏನೆಲ್ಲಾ ಲಾಭ?

ಸ್ವಾಮಿತ್ವ ಯೋಜನೆಯಡಿ ಪಡೆಯುವ ಹಕ್ಕುಪತ್ರಗಳಿಗೆ ಹೆಚ್ಚಿನ ಮಾನ್ಯತೆ ಇದೆ. ಇದು ಸರ್ಕಾರಿ ದಾಖಲೆಯಲ್ಲಿಯೇ ಪರಿಗಣಿಸಲ್ಪಡುತ್ತದೆ. ಇದರಿಂದಾಗಿ ಮನೆ ಮಾಲೀಕರಿಗೆ ಆರ್ಥಿಕ ಮೂಲ ಸೃಷ್ಟಿ ಆದಂತೆ ಆಗಲಿದೆ. ಸ್ವಾಮಿತ್ವದಡಿ ಪಡೆಯುವ ದಾಖಲೆಗಳು ಶಾಸನಬದ್ಧ ಮಾಲೀಕತ್ವ ಹೊಂದುವುದರ ಜತೆಗೆ ಆರೋಗ್ಯ, ಶಿಕ್ಷಣ, ಮದುವೆ ಇತ್ಯಾದಿ ಸಮಾರಂಭಗಳಿಗೆ ಇದನ್ನು ಅಡಮಾನವಿಟ್ಟು ಬ್ಯಾಂಕ್‌ಗಳಲ್ಲಿ ಸಾಲ ಪಡೆಯಬಹುದು. ವ್ಯಾಜ್ಯಗಳು ಸೃಷ್ಟಿಯಾದರೆ ಸಾಕ್ಷಿಪತ್ರವಾಗಿ ದಾಖಲೆಯಾಗಿಯೂ ಬಳಕೆಯಾಗುತ್ತದೆ.

--

ಜಿಲ್ಲೆಯಾದ್ಯಂತ ಸ್ವಾಮಿತ್ವ ಯೋಜನೆ ಯಶಸ್ವಿ ಆಗಿ ಕಾರ್ಯಗತಗೊಳ್ಳುತ್ತಿದೆ. ಈಗಾಗಲೇ ಬಹುತೇಕ ಗ್ರಾಮಗಳಲ್ಲಿ ಡ್ರೋನ್ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಇವುಗಳ ಡಿಜಿಟಲೀಕರಣ ಸೇರಿ ಇತರ ಕಾರ್ಯಗಳು ನಡೆಯುತ್ತಿದ್ದು, 36 ಸಾವಿರಕ್ಕೂ ಹೆಚ್ಚು ಆಸ್ತಿಗಳಿಗೆ ಅಂತಿಮ ಹಕ್ಕುಪತ್ರವನ್ನು ಸಹ ಸಿದ್ಧಪಡಿಲಾಗಿದೆ. ಬಿ.ಆರ್.ಹನುಮೇಗೌಡ, ಉಪನಿರ್ದೇಶಕ, ಭೂ ಮಾಪಕ ಇಲಾಖೆ, ರಾಮನಗರ

--

ಜಿಲ್ಲೆಯಲ್ಲಿನ ಪ್ರಗತಿಯ ವಿವರ

ತಾಲೂಕು  ಹಳ್ಳಿಗಳು          ಡ್ರೋನ್ ಸರ್ವೇ ಡಿಜಿಟಲೀಕರಣ ಕರಡು ಕಾರ್ಡ್ ಅಂತಿಮ ಕಾರ್ಡ್

ಚನ್ನಪಟ್ಟಣ  147                147          130          39476   11122

ಕನಕಪುರ    258               240          215          74104     6563

ಮಾಗಡಿ      285               285          261          50756   11016

ರಾಮನಗರ   134               134          103          38516    8165

ಒಟ್ಟು         824                806         709          202852   36866

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net