

*ನೇರ ಮಾರುಕಟ್ಟೆ ಸೃಷ್ಟಿಸಿಕೊಂಡ ಸೀಬನಹಳ್ಳಿ ಶಶಿಕುಮಾರ್
* ಸಾಮಾಜಿಕ ಜಾಲತಾಣದ ಬಳಕೆ
* ಕುಟುಂಬವೇ ಬೆನ್ನೆಲೆಬು
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಶ್ರಮವಹಿಸಿ ಬೆಳೆದ ಸಲಿಗೆ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ಸಿಗುತ್ತಿಲ್ಲ ಎಂದು ಕೊರಗುವ ರೈತರ ಮಧ್ಯೆ, ಬೆಳೆಗೆ ತಾನೇ ಮಾರುಕಟ್ಟೆ ಸೃಷ್ಟಿಸಿಕೊಳ್ಳುವ ಮೂಲಕ ಚನ್ನಪಟ್ಟಣ ತಾಲೂಕಿನ ರೈತ ಮಾದರಿ ಕೃಷಿಕ ಎನಿಸಿಕೊಂಡಿದ್ದಾರೆ.
ಹೌದು.. ಕೃಷಿಯನ್ನೇ ಉಸಿರಾಗಿಸಿಕೊಂಡಿರುವ ತಾಲೂಕಿನ ಸೀಬನಹಳ್ಳಿಯ ಶಶಿಕುಮಾರ್ ಮಾದರಿ ಕೃಷಿಕ. ಆಡುಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿನಂತೆ, ಶಶಿಕುಮಾರ್ ಮಾಡದ ಕೃಷಿಯೇ ಇಲ್ಲ ಎನ್ನಬಹುದು. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಸೈ ಎನಿಸಿಕೊಂಡಿರುವ ಇವರು ಕೃಷಿ ಬಗೆಗಿನ ಅಪರಿಮಿತ ಪ್ರೀತಿ ಹಾಗೂ ಕಾಯಕ ನಿಷ್ಠೆ ರೈತಕುಲಕ್ಕೆ ಮಾದರಿಯಾಗಿದೆ.
ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ಶಶಿಕುಮಾರ್ ಚಿಕ್ಕಂದಿನಿಂದಲೂ ಕೃಷಿ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದು, ಐದು ಎಕರೆ ಪಿತ್ರಾರ್ಜಿತ ಜಮೀನಿನಲ್ಲಿ ವಿವಿಧ ಕೃಷಿ ಮಾಡುತ್ತಿದ್ದಾರೆ. ಮಾವು, ಭತ್ತ, ತೆಂಗು, ರಾಗಿ, ತೊಗರಿ, ಅಲಸಂದೆ ಸೇರಿ ವಿವಿಧ ದ್ವಿದಳ ಧಾನ್ಯ ಹಾಗೂ ಋತುಮಾನಕ್ಕೆ ತಕ್ಕಂತೆ ವಿವಿಧ ತರಕಾರಿ ಬೆಳೆಯುತ್ತಾರೆ. ಜತೆಗೆ ವಿವಿಧ ಸೊಪ್ಪಿನ ಕೃಷಿಯಲ್ಲೂ ಇವರು ಎತ್ತಿದ ಕೈ ಎನ್ನಬಹುದು. ವರ್ಷಪೂರ್ತಿ ರೇಷ್ಮೆ ಸಾಕುವ ಇವರು ಇದರೊಂದಿಗೆ ಹಸು, ಕುರಿ ಹಾಗೂ ಕೋಳಿ ಸಾಕುತ್ತಾರೆ. ಅಲ್ಲದೇ, ಮೀನು ಸಾಕಣೆಯೂ ಇದೆ. ದಿನವಿಡೀ ಕೃಷಿ ಬದುಕನ್ನೇ ಚಿಂತಿಸುವ ಹಾಗೂ ಧ್ಯಾನಿಸುವ ಇವರಿಗೆ ತಂದೆ ರಾಮಕೃಷ್ಣೇಗೌಡ, ಪತ್ನಿ ಎಂ.ಎಚ್.ರೂಪಾ ಹಾಗೂ ಮೂವರು ಹೆಣ್ಣುಮಕ್ಕಳು ಸಾಥ್ ನೀಡುತ್ತಿದ್ದಾರೆ.
ಕೃಷಿಕ ಶಶಿಕುಮಾರ್, ಬೆಳೆದ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ಮಾರುವ ವ್ಯವಸ್ಥೆ ಕಂಡುಕೊಂಡಿದ್ದಾರೆ. ಯಾವುದೇ ಮಧ್ಯವರ್ತಿ ಹಾಗೂ ಮಾರುಕಟ್ಟೆ ನೆಚ್ಚಿಕೊಂಡಿಲ್ಲ, ಪ್ರತಿ ಸಲನ್ನು ಗ್ರಾಹಕರಿಗೆ ತಲುಪಿಸುವ ಮಾರ್ಗ ಕಂಡುಕೊಂಡಿದ್ದಾರೆ. ಸಾಕಷ್ಟು ಗ್ರಾಹಕರ ಸಂಪರ್ಕ ಹೊಂದಿರುವ ಇವರು, ಸಾಮಾಜಿಕ ಜಾಲತಾಣವನ್ನೇ ವ್ಯಾಪಾರಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಆ ದಿನದ ಬೆಳೆಯ ಮಾಹಿತಿಯನ್ನು ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡಿಕೊಂಡಿದ್ದು, ಅವಶ್ಯಕತೆ ಇರುವವರಿಗೆ ಆಯಾ ದಿನದ ತಾಜಾ ಸೊಪ್ಪು, ತರಕಾರಿ ಹಾಗೂ ಇನ್ನಿತರ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಹೆದ್ದಾರಿಯಲ್ಲಿ ಗ್ರಾಹಕರಿಗೆ ತರಕಾರಿ ಇನ್ನಿತರ ವಸ್ತುಗಳನ್ನು ಮಾರುತ್ತಾರೆ.
ಪ್ರತಿ ಬುಧವಾರ ನಿಡಘಟ್ಟ ಸಂತೆ, ಶುಕ್ರವಾರ ಕೆಸ್ತೂರು, ಶನಿವಾರ ಬೆಸಗರಹಳ್ಳಿ ಹಾಗೂ ಮಂಗಳವಾರ ಮದ್ದೂರು ಸಂತೆಯಲ್ಲೂ ತರಕಾರಿಯನ್ನು ಗ್ರಾಹಕರಿಗೆ ತಲುಪಿಸುತ್ತಾರೆ. ತೋಟದಲ್ಲಿ ಬೆಳೆಯುವ ರಸಭರಿತ ಮಾವಿನ ಹಣ್ಣುಗಳನ್ನು ನೈಸರ್ಗಿಕವಾಗಿ ಹಣ್ಣುಮಾಡಿ ಗ್ರಾಹಕರಿಗೆ ನೀಡುತ್ತಾರೆ. ಇವರ ಬಳಿ ಪ್ರತಿನಿತ್ಯ ಒಂದಲ್ಲ ಒಂದು ತರಕಾರಿ ಮಾರಾಟಕ್ಕೆ ಸಿದ್ಧವಿದ್ದು, ಪ್ರತಿನಿತ್ಯ ಆದಾಯದ ಮೂಲ ಹೊಂದಿದ್ದಾರೆ.
ನಾನು ನನ್ನ ಕುಟುಂಬ ಬದುಕಿದರೆ ಸಾಕು, ಲೋಕದ ಜಂಜಾಟ ನಮಗೇಕೆ ಎನ್ನುವವರ ಮಧ್ಯೆ ಶಶಿಕುಮಾರ್, ಕೃಷಿ ಜ್ಞಾನ ಹಾಗೂ ತಿಳಿವಳಿಕೆಯನ್ನು ಇತರರಿಗೆ ಹಂಚುವ ಕೆಲಸದಲ್ಲೂ ಮುಂದಿದ್ದಾರೆ. ಆಕಾಶವಾಣಿ ಹಾಗೂ ಚಂದನ ವಾಹಿನಿಯ ಫೋನ್‌ಇನ್ ಕಾರ್ಯಕ್ರಮದಲ್ಲಿ ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇದರೊಂದಿಗೆ, ಕ್ಷೇತ್ರ ಭೇಟಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತೋಟಕ್ಕೆ ಬರುವ ರೈತರಿಗೂ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ಅಲ್ಲದೇ ರೈತ ಚಳವಳಿಯಲ್ಲೂ ಮುಂಚೂಣಿಯಲ್ಲಿರುವ ಇವರು, ರೈತಸಂಘದ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದಾರೆ. ಇವರ ಕೃಷಿ ಸಾಧನೆ ಗುರುತಿಸಿ ಸರ್ಕಾರ ಸೇರಿ ವಿವಿಧ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.