ಶಿಸ್ತುಬದ್ಧ ಉದ್ಯಮದಿಂದ ಯಶಸ್ಸು ಸಾಧ್ಯ

ಶಿಸ್ತುಬದ್ಧ ಉದ್ಯಮದಿಂದ ಯಶಸ್ಸು ಸಾಧ್ಯ
Published on

ಹಾಸನ: ಈ ಕಾಲ ಸರ್ಕಾರಿ ನೌಕರರ ಕಾಲವಲ್ಲ, ಬದಲಾಗಿ ಸ್ವಂತ ಉದ್ಯೋಗ ಮಾಡುತ್ತೇವೆ ಎಂದು ಯಾರು ಹೊರಡುತ್ತಾರೋ ಅವರಿಗಿದು ಸೂಕ್ತ ಕಾಲ ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಹೇಳಿದರು.

ಜಿಪಂ ಹೊಯ್ಸಳ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಹಾಗೂ ಕೆಪೆಕ್ ಲಿಮಿಟೆಡ್ ಜಂಟಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಫಲಾನುಭವಿಗಳು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ರೈತರಿಗೆ ಶಕ್ತಿ ತುಂಬುವ ಕೆಲಸ ಇಲಾಖೆಯವರು ಮಾಡಬೇಕು ಎಂದು ಸಲಹೆ ನೀಡಿದರು.

ದೊಡ್ಡ ದೊಡ್ಡ ಉದ್ಯಮ ಬೇರೆ, ಸಣ್ಣ ಉದ್ಯಮಗಳಿಗೆ ಹೆಚ್ಚಿನ ಶಕ್ತಿ ಇರುತ್ತದೆ. ಸ್ತ್ರೀ ಶಕ್ತಿ ಗುಂಪು ಹಾಗೂ ಅನೇಕ ವೈಯಕ್ತಿಕ ಸಂಸ್ಥೆಗಳು ಚೆನ್ನಾಗಿ ವ್ಯಾಪಾರ, ವ್ಯವಹಾರ ಮಾಡುತ್ತಾರೆ. ವ್ಯವಸ್ಥಿತವಾಗಿ ಸರ್ಕಾರದ ಸಾಲ ತೆಗೆದುಕೊಂಡು ಶಿಸ್ತು ಬದ್ಧವಾಗಿ ಉದ್ಯಮ ನಡೆಸಿದರೆ ಯಶಸ್ಸು ಕಾಣಬಹುದು ಎಂದರು.

ಅನೇಕ ಬಾರಿ ಮಾರುಕಟ್ಟೆಯಲ್ಲಿ ಒಳ್ಳೆಯ ದರ ಸಿಗುವುದಿಲ್ಲ. ವಿವಿಧ ಬೆಳೆ ರೋಗಗಳಿಗೆ ತುತ್ತಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇದೇ ರೀತಿ ಅನೇಕ ಸಮಸ್ಯೆಗಳನ್ನು ರೈತರು ಎದುರಿಸುತ್ತಿರುತ್ತಾರೆ. ಇಂತಹ ಕಿರು ಉದ್ಯಮ ರೈತರಿಗೆ ತುಂಬ ಸಹಾಯವಾಗಲಿದೆ ಎಂದು ಕಿವಿಮಾತು ಹೇಳಿದರು.

ಬರೀ ಕೃಷಿಯಲ್ಲೇ ತೊಡಗಿದರೆ ತುಂಬ ಕಷ್ಟವಾಗುತ್ತದೆ. ಇದರ ಜತೆಯಲ್ಲಿ ಯಾವುದಾದರೂ ಒಂದು ಕಿರು ಉದ್ಯಮ ಸ್ಥಾಪಿಸಲು ಮುಂದಾದರೆ ಸರ್ಕಾರ ಸಂಪೂರ್ಣ ಆರ್ಥಿಕ ಬೆಂಬಲ ಕೊಡುತ್ತೇವೆ ಎಂದು ಸಲಹೆ ನೀಡಿದರು. ಇದರ ಅವಕಾಶವನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಯೋಜನೆ ಕಿರು ಆಹಾರ ಸಂಸ್ಕರಣಾ ಉದ್ಯಮಿಗಳ ಸ್ಥಾಪನೆಗೆ, ಉದ್ಯಮದಾರರಿಗೆ ಮತ್ತು ರೈತ ಗುಂಪುಗಳಿಗೆ, ಸ್ವಸಹಾಯ ಸಂಘಗಳಿಗೆ ಬ್ಯಾಂಕ್ ಸಾಲ ಸಂಪರ್ಕಿತ ಸಹಾಯಧನ ಒದಗಿಸುತ್ತಿದ್ದು, ಯೋಜನೆಯಲ್ಲಿ ಶೇ.35 ರಷ್ಟು ಸಹಾಯಧನ (ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲು 60:40, ಗರಿಷ್ಠ ಮೊತ್ತ 10 ಲಕ್ಷ) ಒದಗಿಸುತ್ತಿದೆ. ರಾಜ್ಯ ಸರ್ಕಾರ ಈ ಯೋಜನೆಯನ್ನು ಮತ್ತಷ್ಟು ಆಕರ್ಷಕ ಗೊಳಿಸಿ ರಾಜ್ಯದ ಆಹಾರ ಸಂಸ್ಕರಣಾ ಉದ್ಯಮದಾರರಿಗೆ ನೆರವು ನೀಡಲು ಶೇ.15ರಷ್ಟು ಗರಿಷ್ಠ 5 ಲಕ್ಷ ಹೆಚ್ಚುವರಿ ಸಹಾಯಧನ ನೀಡುತ್ತಿದೆ. ಒಟ್ಟಾರೆ ಯೋಜನೆಯಲ್ಲಿ ಶೇ.50ರಷ್ಟು ಸಹಾಯಧನ ಗರಿಷ್ಠ 15 ಲಕ್ಷ ಸಹಾಯಧನ ಫಲಾನುಭವಿಗಳಿಗೆ ಲಭ್ಯವಿದೆ. ಮುಖ್ಯಮಂತ್ರಿ ಅವರು 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಪ್ರಸ್ತುತ ಸಾಲಿನಲ್ಲಿ 5 ಸಾವಿರ ಕಿರು ಆಹಾರ ಸಂಸ್ಕರಣಾ ಉದ್ಯಮ ಸ್ಥಾಪಿಸುವ ಯೋಜನೆ ಘೋಷಣೆ ಮಾಡಿ ಈ ಉದ್ದೇಶಕ್ಕಾಗಿ ಆಯವ್ಯಯದಲ್ಲಿ 206 ಕೋಟಿ ರೂ. ಅನುದಾನ ಒದಗಿಸುವರು ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಎಂಡಿ ಶಿವಪ್ರಕಾಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಯೋಗೀಶ್, ಕೋಮಲಾ, ರಮೇಶ್ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net