

ಹನೂರು: ವಿದ್ಯಾರ್ಥಿ ದಿಸೆಯಲ್ಲೇ ಉತ್ತಮ ಪುಸ್ತಕಗಳನ್ನು ಓದುವುದರಿಂದ ಚಿಂತನಾ ಸಾಮರ್ಥ್ಯ ಸದೃಢಗೊಳ್ಳುತ್ತದೆ. ಜತೆಗೆ ಭಾಷಾ ಜ್ಞಾನ ಹೆಚ್ಚುತ್ತದೆ ಎಂದು ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಆವರಣದಲ್ಲಿ ಗುರುವಾರ ಶ್ರೀ ಮಲೆಮಹದೇಶ್ವರ ಸ್ವಾಮಿ ಕೃಪಾ ಎಜುಕೇಷನ್ ಸೊಸೈಟಿಯ ಶಾಲಾ- ಕಾಲೇಜುಗಳ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳುವಲ್ಲಿ ವಿದ್ಯಾರ್ಥಿ ಜೀವನ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಶೈಕ್ಷಣಿಕ ಸಾಧನೆಯತ್ತ ಹೆಚ್ಚು ಗಮನ ನೀಡಬೇಕು. ಈ ದಿಸೆಯಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದುವುದರ ಮೂಲಕ ಗುರುಗಳು ಹೇಳಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕು. ಇದರಿಂದ ಯಶಸ್ಸು ಗಳಿಸಲು ಸಾಧ್ಯ. ಅಲ್ಲದೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯ ಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪ್ರಚಲಿತ ಘಟನೆಗಳ ಅರಿವಿರಬೇಕು. ಓದುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಸಂವಹನ ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕು. ಇದರ ಜತೆಗೆ ಸಾಧನೆಗೆ ಸ್ಫೂರ್ತಿದಾಯಕವಾದ ಸಾಧಕರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ನಿಶ್ಚಿತ ಗುರಿಯನ್ನು ಹೊಂದಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ, ವಿದ್ಯಾರ್ಥಿಗಳು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕಾದರೆ ಸತ್ಯ ಹಾಗೂ ಧರ್ಮದ ಹಾದಿಯಲ್ಲಿ ಸಾಗಬೇಕು. ಸತ್ಕಾರ್ಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಹಾಗೂ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.
ಸಾಹಿತಿ ಡಾ.ಪ್ರಧಾನ್ ಗುರುದತ್ತ, ಮೈಸೂರು ನಟರಾಜ ವಿದ್ಯಾಸಂಸ್ಥೆಯ ವಿಶೇಷಾಧಿಕಾರಿ ಡಾ.ಎಸ್.ಶಿವರಾಜಪ್ಪ, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು, ಬೇಡಗಂಪಣ ಮುಖಂಡರಾದ ಕೆ.ವಿ ಮಾದೇಶ್, ಪುಟ್ಟಣ್ಣ, ಮಠದ ಭಕ್ತರು ಹಾಗೂ ಇನ್ನಿತರರು ಇದ್ದರು.