ಪ್ರತಿಫಲದ ನಿರೀಕ್ಷೆ ಇಲ್ಲದಿದ್ದಾಗ ಬದುಕಿನಲ್ಲಿ ಯಶಸ್ಸು: ಜಯ ಪೂಜಾರಿ ಅನಿಸಿಕೆ

Bel_Janmastami
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ನಮ್ಮ ಕೆಲಸವನ್ನು ಪ್ರಾಮಾಣಿಕತೆ, ಶ್ರದ್ಧೆಯಿಂದ ಮಾಡಿ ಪ್ರತಿಫಲವನ್ನು ನಿರೀಕ್ಷೆ ಮಾಡದಿದ್ದಾಗ ಬದುಕಿನಲ್ಲಿ ಒಳಿತಾಗುತ್ತದೆ ಎಂಬ ಶ್ರೀ ಕೃಷ್ಣ ಸಂದೇಶ ಇಂದಿಗೂ ಪ್ರಸ್ತುತ ಎಂದು ಮಂಗಳೂರು ಸೋಮೇಶ್ವರ ಪುರಸಭೆ ಸದಸ್ಯ ಜಯ ಪೂಜಾರಿ ಹೇಳಿದರು.

ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ವತಿಯಿಂದ ನಿಟ್ಟಡ್ಕದಲ್ಲಿ ನಡೆದ ಮೊಸರು ಕುಡಿಕೆ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಯುವಶಕ್ತಿ ಈ ದೇಶದ ಆಸ್ತಿ. ಯುವ ಮನಸ್ಸುಗಳು ಒಟ್ಟಾಗಿ ಕಟ್ಟಿದ ಯುವಶಕ್ತಿ ಫ್ರೆಂಡ್ಸ್ ತಂಡ ಸಮಾಜಮುಖಿಯಾಗಿ ತೊಡಗಿಸಿಕೊಂಡಿದೆ. ಊರಿನ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ, ಅಳದಂಗಡಿ ಸಿಎ ಬ್ಯಾಂಕ್ ನಿರ್ದೇಶಕ ದಿನೇಶ್ ಪಿ.ಕೆ., ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ರಂಜಿತ್ ಎಚ್.ಡಿ., ಸೂಳಬೆಟ್ಟು ಹಾ.ಉ.ಸ.ಸಂಘದ ಅಧ್ಯಕ್ಷ ನಿರಂಜನ್ ಜೋಶಿ ಮಾತನಾಡಿದರು.ಪ್ರಗತಿಪರ ಕೃಷಿಕ ನೋಣಯ್ಯ ಶೆಟ್ಟಿ ಕುರೆಲ್ಯಗುತ್ತು ಕಾರ್ಯಕ್ರಮ ಉದ್ಘಾಟಿಸಿದರು.

ಬಳಂಜ ಗ್ರಾಪಂ ಅಧ್ಯಕ್ಷೆ ಶೋಭಾ ಕುಲಾಲ್, ಅಳದಂಗಡಿ ಸಿಎ ಬ್ಯಾಂಕ್ ನಿರ್ದೇಶಕ ಎಚ್.ದೇಜಪ್ಪ ಪೂಜಾರಿ, ವಿಶ್ವನಾಥ ಹೊಳ್ಳ, ದೇವಿಪ್ರಸಾದ್ ಶೆಟ್ಟಿ,ಬಳಂಜ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗುರುಪ್ರಸಾದ್ ಹೆಗ್ಡೆ, ಪ್ರಗತಿಪರ ಕೃಷಿಕ ದಿನೇಶ್ ಕೋಟ್ಯಾನ್ ಕುದ್ರೋಟ್ಟು, ನಾಲ್ಕೂರು ರಾಮನಗರ ಹಾ.ಉ.ಸ.ಸಂಘದ ಅಧ್ಯಕ್ಷ ವಸಂತ ಶೆಟ್ಟಿ, ಬಳಂಜ ಹಾ.ಉ.ಮ.ಸ.ಸಂಘದ ಅಧ್ಯಕ್ಷೆ ಪುಷ್ಪಾವತಿ, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ನಿಕಟಪೂರ್ವಾಧ್ಯಕ್ಷ ಪ್ರವೀಣ್ ಕುಮಾರ್ ಎಚ್.ಎಸ್ ಉಪಸ್ಥಿತರಿದ್ದರು.

ಯುವಶಕ್ತಿ ಫ್ರೆಂಡ್ಸ್ ಕ್ಲಬ್ ಪ್ರಮುಖರಾದ ಸಂತೋಷ್ ಪಿ.ಕೋಟ್ಯಾನ್ ಸ್ವಾಗತಿಸಿದರು. ಚಂದ್ರಹಾಸ್ ಬಳಂಜ ನಿರೂಪಿಸಿದರು. ಕರುಣಾಕರ ಹೆಗ್ಡೆ ಮತ್ತು ಯತೀಶ್ ವೈ.ಎಲ್.ವಂದಿಸಿದರು. ಹರೀಶ್ ವೈ.ಚಂದ್ರಮ ಕ್ರೀಡಾ ವೀಕ್ಷಣಾ ವಿವರಣೆ ನೀಡಿದರು. ತಾಲೂಕು ಮಟ್ಟದ ಕೃಷ್ಣ ವೇಷ ಸ್ಪರ್ಧೆಯಲ್ಲಿ 68 ಪುಟಾಣಿಗಳು ಕೃಷ್ಣನ ವೇಷಧಾರಿಗಳಾಗಿ ಭಾಗವಹಿಸಿದ್ದರು. ವಿಶೇಷ ಆಕಷರ್ಣೆಯಾಗಿ ಕೃಷ್ಣ ರಂಗಿನಾಟ, ರಂಗಿನ ಹೋಳಿ ಬಣ್ಣದ ಓಕುಳಿ ಗಮನ ಸೆಳೆಯಿತು.

ಸಾಧಕರಿಗೆ ಸನ್ಮಾನ, ಸಾಂತ್ವನ ನಿಧಿ ಹಸ್ತಾಂತರ

ರವೀಂದ್ರ ಶೆಟ್ಟಿ ಬಳಂಜ- ಸಾಮಾಜಿಕ ಕ್ಷೇತ್ರ, ಲಲಿತಾ ಟೀಚರ್- ಶೈಕ್ಷಣಿಕ ಕ್ಷೇತ್ರ, ಚೆನಮು ಪೂಜಾರಿ ಸಾಂತ್ಯಾಲು-ಜಾನಪದ ಕ್ಷೇತ್ರ, ಕೊರಪೋಲು ಯೈಕುರಿ- ಪ್ರಸೂತಿ ತಜ್ಞೆ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧಕರಾದ ಪಿಯುಸಿಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದ ಅನುಪ್ರಿಯಾ ಬಳಂಜ, ಸಾಧಕರಾದ ಕೃತಿಕಾ ಜೈನ್ ಡೇವುಣಿ, ಪ್ರಾಣೇಶ್ ಶೆಟ್ಟಿ ಕುರೆಲ್ಯ, ಎಸ್ಸೆಸ್ಸೆಲ್ಸಿ ಸಾಧಕರಾದ ಶರಣ್ಯ ಬರಮೇಲು, ಮನ್ವಿತಾ ಪೂಜಾರಿ ಅವರನ್ನು ಗೌರವಿಸಲಾಯಿತು. ಉತ್ತಮ ಕೆಲಸ ನಿರ್ವಹಿಸುತ್ತಿರುವ ಅಳದಂಗಡಿ ಮೆಸ್ಕಾಂ ಇಲಾಖೆಯ ಲೈನ್‌ಮನ್ ಜಟ್ಟಿಂಗರಾಯ ಅವರನ್ನು ಗುರುತಿಸಲಾಯಿತು. ಎರಡು ಕಣ್ಣು ಕಳೆದುಕೊಂಡಿರುವ ಯುವಕ ಪೂರ್ಣೇಶ್ ಅವರಿಗೆ ಸಾಂತ್ವನ ನಿಧಿ ಹಸ್ತಾಂತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net