

ಕೆ.ಆರ್.ಸಾಗರ: ಕೃಷ್ಣರಾಜಸಾಗರ ವಿಶ್ವ ಪ್ರಖ್ಯಾತ ಬೃಂದಾವನ ಮತ್ತು ಸಂಗೀತ ಕಾರಂಜಿಗಳನ್ನು ನೋಡಲು ಕಳೆದ ಒಂದು ವಾರದಲ್ಲಿ 80 ಸಾವಿರ ಪ್ರವಾಸಿಗರು ಭೇಟಿ ನೀಡಿ ವೀಕ್ಷಣೆ ಮಾಡಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಗಣನೀಯ ಪ್ರಮಾಣಲ್ಲಿ ಇಳಿಮುಖವಾಗಿದೆ.
ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ 1933ರಲ್ಲಿ ನಿರ್ಮಿಸಿದ ಮೊಗಲ್ ಶೈಲಿ ಬೃಂದಾವನಕ್ಕೆ ಈ ಬಾರಿ ದಸರಾ ಹಬ್ಬದ ದಿನಗಳಾದ ಅಕ್ಟೋಬರ್ 3 ರಂದು 5170, 4 ರಂದು 6068, 5 ರಂದು 8977, 6ರಂದು 10963, 7 ರಂದು 5554, 8 ರಂದು 5207, 9 ರಂದು 5210, 10 ರಂದು 6584, 11ರಂದು 11629 ಜನರು ಭೇಟಿ ನೀಡಿದ್ದು, 10 ದಿನಗಳಲ್ಲಿ ಒಟ್ಟು ಸುಮಾರು 80 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದಾರೆ. ಪ್ರವಾಸಿಗರು ಹಾಗೂ ವಾಹನ ಶುಲ್ಕ ಸೇರಿ 21,62,130 ಸಂಗ್ರಹವಾಗಿದೆ.
1.95 ಕೋಟಿ ವೆಚ್ಚದಲ್ಲಿ ವಿಶೇಷ ದೀಪಾಲಂಕಾರ ಹಾಗೂ ಸಾಂಸ್ಕೃತಿ ಕಾರ್ಯಕ್ರಮ ನಡೆಸಿದರೂ ಕೂಡ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಕಾರಂಜಿಗಳ ದುರಸ್ಥಿ ಕಾರ್ಯನಡೆಯುತ್ತಿದ್ದು ಬೃಂದಾವನಕ್ಕೆ ಪ್ರವಾಸಿಗರು ಕಡಿಮೆಯಾಗಲು ಕಾರಣ ಎನ್ನಲಾಗಿದೆ.
ಕರೊನ ನಂತರ ಇದೇ ಮೊದಲ ಬಾರಿಗೆ ಕಡಿಮೆ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದಾರೆ. ಕಳೆದ ವರ್ಷ ದಸರಾ ಮತ್ತು ಮರು ದಿನ 50 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದರು ಎಂದು ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಒಬ್ಬರು ಹೇಳಿದ್ದಾರೆ.