

* ರಾಜ್ಯ ಕೆಪೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ಮಾಹಿತಿ
* ಎಂಎಫ್ ಎಂಇ ಯೋಜನೆಯ ಜಿಲ್ಲಾಮಟ್ಟದ ಜಾಗೃತಿ, ನೋಂದಣಿ ಅಭಿಯಾನ
ರಾಮನಗರ
ರಾಜ್ಯದಲ್ಲಿ ಕೃಷಿ ಆಧಾರಿತ ಆಹಾರ ಸಂಸ್ಕರಣಾ ಉದ್ದಿಮೆ ಪ್ರಾರಂಭಿಸಲು ಸಕಾಲವಾಗಿದ್ದು, ಪ್ರತಿ ಉದ್ದಿಮೆಗೆ ಗರಿಷ್ಠ 15 ಲಕ್ಷ ರೂ. ಸಬ್ಸಿಡಿಯಂತೆ ರಾಜ್ಯದಲ್ಲಿ 206 ಕೋಟಿ ರೂ. ಅನುದಾನ ಲಭ್ಯವಿದೆ ಎಂದು ರಾಜ್ಯ ಕೆಪೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ಪಿಎಂಎಫ್ ಎಂಇ ಯೋಜನೆಯ ಜಿಲ್ಲಾಮಟ್ಟದ ಜಾಗೃತಿ ಮತ್ತು ನೋಂದಣಿ ಅಭಿಯಾನದಲ್ಲಿ ಮಾತನಾಡಿದರು.
ಪಿಎಂಎಫ್ ಎಂಇ ಯೋಜನೆಯಡಿ ಕೇಂದ್ರ ಶೇ.40 ಮತ್ತು ರಾಜ್ಯ ಸರ್ಕಾರ ಶೇ.60 ಅನುದಾನ ನೀಡುತ್ತವೆ. ಇದರಲ್ಲಿ ಈಗ ರಾಜ್ಯದಲ್ಲಿ ಆಹಾರ ಸಂಸ್ಕರಣೆಗೆ ಸಂಬAಧಿಸಿದ ಕಿರು ಉದ್ದಿಮೆ ಆರಂಭಿಸಲು ಹೆಚ್ಚಿನ ಅವಕಾಶವಿದ್ದು, ಪ್ರಸ್ತುತ ಇರುವ ಅನುದಾನ ಬಳಸಿಕೊಳ್ಳಲು ಮುಂದಿನ ಮಾರ್ಚ್ 31ರವರೆಗೆ ಅವಕಾಶವಿದೆ. ಈ ಬಗ್ಗೆ ಯುವ ಸಮುದಾಯ ಮತ್ತು ಆಸಕ್ತರಲ್ಲಿ ಅರಿವು ಮೂಡಿಸಲಾಗುತ್ತಿದೆ. ಇದರ ಲಾಭವನ್ನು ಪಡೆದುಕೊಂಡು ಹೆಚ್ಚು ಹೆಚ್ಚು ಜನರು ಉದ್ದಿಮೆ ಆರಂಭಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ 5 ವರ್ಷಗಳಲ್ಲಿ 6300 ಮಂದಿ ತಲಾ 15 ಲಕ್ಷ ರೂ. ವರೆಗೂ ಸಬ್ಸಿಡಿ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಸುಮಾರು 200 ವಿವಿಧ ಉತ್ಪನ್ನಗಳನ್ನು ಸಿದ್ಧಗೊಂಡು 500 ಕೋಟಿ ರೂ. ವರೆಗೂ ವ್ಯವಹಾರ ನಡೆಯುತ್ತಿದೆ ಎಂದು ತಿಳಿಸಿದರು.
ಯಾವುದೇ ಜಿಲ್ಲೆಗೆ ಇಂತಹುದ್ದೇ ಉತ್ಪನ್ನದ ಕಿರು ಉದ್ದಿಮೆ ಮಾಡಬೇಕೆನ್ನುವ ನಿಯಮವಿಲ್ಲ. ಆಸಕ್ತಿ ಇರುವ ಉದ್ದಿಮೆ ಮಾಹಿತಿ ನೀಡಿದರೆ ಜಿಲ್ಲಾ ಸಂಪನ್ಮೂಲ ಅಧಿಕಾರಿಕ್ರಿಯಾ ಯೋಜನೆ ಸಿದ್ಧಪಡಿಸಿಕೊಡುವ ಹಂತದಿAದ ಸಾಲ, ಸಬ್ಸಿಡಿ ಕೊಡಿಸುವ ಹಂತದವರೆಗೂ ನೆರವಿಗೆ ನಿಲ್ಲಲಿದ್ದಾರೆ. ಈ ಸಂಬಂಧ ಅರ್ಜಿ ಸಲ್ಲಿಕೆಯಾದ 15 ದಿನಗಳ ಒಳಗೆ ವಿಲೇವಾರಿ ಮಾಡಿ ಸಾಲ ತಲುಪುವಂತೆ ಸೂಚನೆ ನೀಡಲಾಗಿದೆ. ಪ್ರಸ್ತುತ ಸಾಲಿನಲ್ಲಿ 5 ಸಾವಿರ ಮಂದಿಗೆ ಸಾಲ ಸೌಲಭ್ಯ ದೊರಕಿಸಿಕೊಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಹಿಂದೆ ಪಡೆದ ಸಾಲಗಳಿಗೆ ಇನ್ನೂ ಸಬ್ಸಿಡಿ ಬಿಡುಗಡೆ ಮಾಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈಗಾಗಲೇ 25 ಕೋಟಿ ರೂ. ಬಾಕಿ ಸಬ್ಸಿಡಿಯನ್ನು ಮಂಜೂರು ಮಾಡಲಾಗಿದೆ, ಮುಂದೆಯೂ ಸಬ್ಸಿಡಿ ಹಣ ವಿಳಂಬವಾಗದAತೆ ಕ್ರಮವಹಿಸಲಾಗಿದೆ. | ಸಿ.ಎನ್.ಶಿವಪ್ರಕಾಶ್, ರಾಜ್ಯ ಕೆಪೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ
ರೈತರ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ, ಜಿಪಂ ಸಿಇಒ ಸೇರಿ ಇತರೆ ಹಿರಿಯ ಅಧಿಕಾರಿಗಳು ಗೈರಾಗಿದ್ದಕ್ಕೆ ಸಭೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಸಂಬಂಧಪಟ್ಟವರೇ ಸಭೆಗೆ ಬಾರದಿದ್ದರೆ ಈ ಸಭೆಯನ್ನು ಏಕೆ ಕರೆಯಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸಭೆಗೆ ಆಗಮಿಸಿದ ಶಿವಪ್ರಕಾಶ್ ತುರ್ತು ಕ್ಯಾಬಿನೆಟ್ ಕಾರಣ ಜಿಲ್ಲಾ ಉಸ್ತುವಾರಿ ಸಚಿವರು ಬರಲು ಆಗಲಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿ, ನಂತರ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಗೈರಾಗಿದ್ದಕ್ಕೆ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಸಾಲದ ಅವಧಿ ಮುಗಿಯುತ್ತಾ ಬಂದಿದ್ದರೂ ಇನ್ನು ನಮಗೆ ಸಬ್ಸಿಡಿ ಹಣ ಬಿಡುಗಡೆಯಾಗಿಲ್ಲ, ಈಗಲೂ ನಾವು ಬಡ್ಡಿ ಕಟ್ಟುತ್ತಿದ್ದೇವೆ. ಸಬ್ಸಿಡಿ ಕೊಟ್ಟರಷ್ಟೇ ನಮ್ಮ ಯೋಜನೆಗಳನ್ನು ಮುಂದುವರಿಸಲು ಸಾಧ್ಯ. ಆದರೆ, ಇದ್ಯಾವುದರ ಬಗ್ಗೆಯೂ ಅರಿವಿಲ್ಲದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನಮಗೆ ಸಬ್ಸಿಡಿ ಬೇಡ, ಬೆಳೆಗಳಿಗೆ ಉತ್ತಮ ಬೆಲೆ ಕೊಟ್ಟರೆ ನಿಮಗೆ ತೆರಿಗೆಯನ್ನೂ ಕಟ್ಟುತ್ತೇವೆ ಎಂದು ರೈತರು ಹೇಳಿದರು.
ಬ್ಯಾಂಕ್ ಅಧಿಕಾರಿಗಳ ವಿರುದ್ಧವೂ ಆಕ್ರೋಶ ಹೊರಹಾಕಿದ ರೈತರು, ಸಬ್ಸಿಡಿ ಸಾಲ ಎಂದರೆ ರೈತರನ್ನು ಬ್ಯಾಂಕ್ ಒಳಗೂ ಅಧಿಕಾರಿಗಳು ಬಿಟ್ಟುಕೊಳ್ಳುವುದಿಲ್ಲ. ಇದರ ಜತೆಗೆ ಕನ್ನಡವನ್ನೂ ಮಾತನಾಡಲ್ಲ ಎಂದು ಟೀಕಿಸಿದರು. ಈ ವೇಳೆ ಮಾತನಾಡಿದ ಶಿವಪ್ರಕಾಶ್, ಯಾವುದೇ ಕಾರಣಕ್ಕೂ ರೈತರಿಗೆ ಸಾಲ ನೀಡಲಾಗುವುದಿಲ್ಲ ಎಂದು ಬ್ಯಾಂಕ್ ಅಧಿಕಾರಿ ಹೇಳುವಂತೆಯೇ ಇಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಬ್ಯಾಂಕ್‌ನ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಲಾಗಿದೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಕೆ.ರಾಜು, ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್, ಕೃಷಿಕ ಸಮಾಜದ ಅಧ್ಯಕ್ಷ ಗೋಪಾಲ್, ಮುಖಂಡರಾದ ಚಿಕ್ಕಭೈರೇಗೌಡ, ಜಂಟಿ ಕೃಷಿ ನಿರ್ದೇಶಕಿ ಅಂಬಿಕಾ, ಸಹಾಯಕ ನಿರ್ದೇಶಕಿ ಶಶಿಕಲಾ, ವನಿತಾ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಸನ್ನ ಕುಮಾರ್ , ಮುಖಂಡರಾ ಪ್ರೇಮ್, ನಿಂಗಪ್ಪ, ವಿಎಚ್.ರಾಜು, ರೈತ ಮುಖಂಡ ಸಿ ಪುಟ್ಟಸ್ವಾಮಿ ಮುಂತಾದವರು ಇದ್ದರು.