

ಚಿಕ್ಕಬಳ್ಳಾಪುರ: ಮಳೆಗಾಲದಲ್ಲಿ ಹಾನಿ ಪ್ರಕರಣಗಳನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಸೂಚಿಸಿದರು. ಜಿಲ್ಲಾಡಳಿತ ಭವನದ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಗೋಡೆಗಳನ್ನು ಮಣ್ಣಿನಿಂದ ಹಾಗೂ ಚಾವಣಿಯನ್ನು ಕಲ್ಲು ಚಪ್ಪಡಿಗಳಿಂದ ನಿರ್ಮಿಸಿರುವ ಕಚ್ಚಾ ಮನೆಗಳನ್ನು ಆಯಾ ವ್ಯಾಪ್ತಿಯಲ್ಲಿ ಕಂದಾಯ ನಿರೀಕ್ಷಕರು ತುರ್ತಾಗಿ ಗುರುತಿಸಬೇಕು. ಶಿಥಿಲಾವಸ್ಥೆಯ ಮನೆಗಳ ಪಟ್ಟಿಯನ್ನು ಸಲ್ಲಿಸಬೇಕು. ಮುಂದಿನ ದಿನಗಳಲ್ಲಿ ಜಡಿ ಮಳೆ ಬರುವ ಸಾಧ್ಯತೆ ಇದ್ದು ಇಂತಹ ಸಂದರ್ಭದಲ್ಲಿ ಕಚ್ಚಾ ಮನೆಗಳಲ್ಲಿ ವಾಸಿಸುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಎಲ್ಲ ರೈತರು ಬೆಳೆ ವಿಮೆ ಮಾಡಿಸುವಂತಾಗಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಎನ್.ಭಾಸ್ಕರ್, ಜಿಪಂ ಉಪಕಾರ್ಯದರ್ಶಿ ಅಪೂರ್ವ ಬಿದರಿ ಮತ್ತಿತರರು ಇದ್ದರು.
37 ಆರೋಗ್ಯ ಕೇಂದ್ರಗಳು: ಹದಿನೈದನೇ ಹಣಕಾಸು ಯೋಜನೆಯಡಿ ಜಿಲ್ಲೆಯಲ್ಲಿ 37 ಆಯುಷ್ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲು ಯೋಜಿಸಿದ್ದು, ಇದಕ್ಕಾಗಿ ಜಾಗ ಗುರುತಿಸಲು ತಹಸೀಲ್ದಾರ್‌ಗಳಿಗೆ ಸೂಚಿಸಲಾಯಿತು. ಚಿಕ್ಕಬಳ್ಳಾಪುರ 9, ಚಿಂತಾಮಣಿ 5, ಶಿಡ್ಲಘಟ್ಟ 4, ಗೌರಿಬಿದನೂರು 4, ಬಾಗೇಪಲ್ಲಿ 13, ಗುಡಿಬಂಡೆಯಲ್ಲಿ 3 ಆಯುಷ್ ಅರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಡೆಂಘೆ ಪ್ರಕರಣಗಳ ಏರಿಕೆ: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ 210 ಡೆಂಘೆ ಪ್ರಕರಣಗಳು (ಜೂ.1ರಿಂದ ಜು.31ರವರೆಗೆ) ದಾಖಲಾಗಿವೆ. ಇನ್ನೂ 5 ದಿನಗಳಲ್ಲಿ 16 ಪ್ರಕರಣಗಳು ದೃಢಪಟ್ಟಿದ್ದು ಇದರೊಂದಿಗೆ ಪ್ರಸ್ತುತ 226 ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಶೇ.80ರಷ್ಟು ಪ್ರಕರಣಗಳು ಗ್ರಾಮಾಂತರ ಪ್ರದೇಶದಲ್ಲಿ ವರದಿಯಾಗಿದೆ. ಇದಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಗ್ರಾಮಾಂತರ ಪ್ರದೇಶಗಳಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳ ನಾಶ ಕಾರ್ಯವನ್ನು ಸಮರೋಪಾಧಿಯಲ್ಲಿ ಕೈಗೊಳ್ಳಬೇಕಿದೆ. ನೀರಿನ ತೊಟ್ಟಿಗಳು, ಡ್ರಮ್, ಬ್ಯಾರಲ್, ಏರ್‌ಕೂಲರ್ ಸೇರಿ ಇತ್ಯಾದಿ ಉಪಕರಣಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ನೀಡಬೇಕು. ಕಡ್ಡಾಯವಾಗಿ ಒಣ ದಿನ ಆಚರಿಸಬೇಕು. ಬಯಲಿನಲ್ಲಿರುವ ಟೈರು, ಎಳನೀರಿನ ಚಿಪ್ಪು, ಒಡೆದ ಬಾಟಲಿ ಸೇರಿ ಘನತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು. ಕಾಲಕಾಲಕ್ಕೆ ತ್ಯಾಜ್ಯವು ಸೂಕ್ತ ರೀತಿಯಲ್ಲಿ ವಿಲೇವಾರಿಯಾಗಬೇಕು. ಉತ್ತಮ ನೈರ್ಮಲ್ಯ ವಾತಾವರಣ ನಿರ್ಮಾಣದ ಮೂಲಕ ಕಾಯಿಲೆಗಳು ಹರಡುವಿಕೆ ಕಡಿವಾಣ ಹಾಕಬಹುದು ಎಂದು ತಿಳಿಸಿದರು.