ಮೂವರು ಶಿಕ್ಷಕರಿಂದ ನಾಮಪತ್ರ ಸಲ್ಲಿಕೆ

16-kollegal-1,,,
Published on

ಕೊಳ್ಳೇಗಾಲ: ಅ.28ರಂದು ನಡೆಯಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಸಾಲಿನ ನಿರ್ದೇಶಕರ ಸ್ಥಾನದ ಚುನಾವಣೆಗೆ ಕೊಳ್ಳೇಗಾಲ ಶಾಖೆಯ ಪ್ರಾಥಮಿಕ ಶಾಲಾ ವಿಭಾಗದಿಂದ ಶಿಕ್ಷಕರಾದ ಎಂ.ಚಂದ್ರಶೇಖರ್, ಶಿವಕುಮಾರ್ ಹಾಗೂ ಸಂತೋಷ್‌ಕುಮಾರ್ ಬುಧವಾರ ನಾಮಪತ್ರ ಸಲ್ಲಿಸಿದರು.


ಅ.2ರಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅ.18ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಅದೇ ದಿನ ನಾಮಪತ್ರ ಹಿಂಪಡೆಯಲು ಅವಕಾಶವಿರುತ್ತದೆ ಹಾಗೂ 21ರಂದು ನಾಮಪತ್ರ ಪರಿಶೀಲನೆ ಮಾಡಲಾಗುವುದು.


ಕೊಳ್ಳೇಗಾಲ ಶಾಖೆಯಲ್ಲಿ ಒಟ್ಟು 1066 ಮತದಾರರಿದ್ದು, 32 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಶಿಕ್ಷಣ ಇಲಾಖೆಯಲ್ಲಿ ಪ್ರೌಢಶಾಲಾ ವಿಭಾಗಕ್ಕೆ 2, ಪ್ರಾಥಮಿಕ ಶಾಲಾ ವಿಭಾಗದ 5 ಒಟ್ಟು 7 ಸ್ಥಾನಗಳು, ಆರೋಗ್ಯ ಇಲಾಖೆಯ 4, ಕಂದಾಯ ಇಲಾಖೆಯ 2, ಲೋಕೋಪಯೋಗಿ ಇಲಾಖೆಯ 2 ಹಾಗೂ ಉಳಿದ ಇಲಾಖೆಗಳ ಒಂದೊಂದು ಸ್ಥಾನ ಸೇರಿದಂತೆ ಒಟ್ಟು 32 ನಿರ್ದೇಶಕ ಸ್ಥಾನಗಳಿಗೆ ಅಂದು ಚುನಾವಣೆ ನಡೆಯಲಿದೆ, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.


ಈ ಹಿನ್ನೆಲೆಯಲ್ಲಿ ಈ ಮೂವರು ಅಭ್ಯರ್ಥಿಗಳು ಕೊಳ್ಳೇಗಾಲ ಶಾಖೆಯ ನಿರ್ದೇಶಕರ ಸ್ಥಾನಕ್ಕೆ ಪ್ರಾಥಮಿಕ ಶಾಲಾ ವಿಭಾಗದಿಂದ ಸ್ಪರ್ಧೆ ಬಯಸಿ ಬುಧವಾರ ಸರ್ಕಾರಿ ನೌಕರರ ಸಂಘದ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಸುಂದರಮ್ಮ ಹಾಗೂ ಉಪ ಚುನಾವಣಾಧಿಕಾರಿ ಎ.ವಿನ್ಸೆಂಟ್ ಅವರಿಗೆ ನಾಮಪತ್ರ ಸಲ್ಲಿಸಿದರು.


ಪ್ರೌಢಶಾಲಾ ಶಿಕ್ಷಕ ಹಾಗೂ ಕೊಳ್ಳೇಗಾಲ ಶಾಖೆಯ ನಿಕಟಪೂರ್ವ ಕಾರ್ಯದರ್ಶಿ ಚಿಕ್ಕರಾಜು, ಖಲೀಂಪಾಷಾ, ಶಿಕ್ಷಕರಾದ ಬಿ.ಸಿದ್ದ ರಾಜು, ರಮೇಶ್‌ಕುಮಾರ್, ಆರ್.ಬಸವರಾಜು, ಮುಕುಂದ, ಮಹೇಶ್, ಎನ್‌ಜಿಒ ಸಿದ್ದರಾಜು, ಬಸವಣ್ಣ, ಜೆ.ರಾಜು, ಕೆ.ಬಸವರಾಜು, ಮಹೇಶ್, ಲಿಂಗರಾಜು, ಸೋಮು, ಶಿವು ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net