ಸುಬ್ಬಾರೆಡ್ಡಿಗೆ ಸುಪ್ರೀಂನಲ್ಲಿ ಮತ್ತೆ ಮುಖಭಂಗ

FotoJet (3)
Published on

ಸದಸ್ಯತ್ವ ಅಸಿಂಧು ಅರ್ಜಿ ವಜಾ ಕೋರಿ 4ನೇ ಬಾರಿ ಸಲ್ಲಿಸಿದ್ದ ಮನವಿಯೂ ತಿರಸ್ಕೃತ ಶಾಸಕರಿಗೆ ಶುರುವಾಗುತ್ತ ಕಾನೂನುಸಂಕಷ್ಟ?

ಬಾಗೇಪಲ್ಲಿ: ಚುನಾವಣಾ ತಕರಾರು ಅರ್ಜಿಯನ್ನು ವಜಾಗೊಳಿಸುವಂತೆ ಕೋರಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ನಾಲ್ಕನೇ ಬಾರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂಕೋರ್ಟ್ ರಾಜ್ಯ ಹೈಕೋರ್ಟ್‌ನಲ್ಲೇ ವಿಚಾರಣೆ ಮುಂದುವರಿಸುವಂತೆ ನಿರ್ದೇಶಿಸಿದೆ.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ 2023 ಮೇ 10ರಂದು ನಡೆದ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಎನ್.ಸುಬ್ಬಾರೆಡ್ಡಿ ಚುನಾವಣಾ ಅಯೋಗಕ್ಕೆ ಸಲ್ಲಿಸಿರುವ ನಾಮಪತ್ರ ದೋಷಪೂರಿತವಾಗಿದೆ, ಆಸ್ತಿ ವಿವರ ಮುಚ್ಚಿಟ್ಟಿರುವುದಲ್ಲದೆ ಆಸ್ತಿ ತೆರಿಗೆ ಬಾಕಿ ಕುರಿತು ನಾಮಪತ್ರದಲ್ಲಿ ಮಾಹಿತಿ ನೀಡದೆ ಚುನಾವಣಾ ಅಕ್ರಮ ಎಸಗಿ ಪ್ರಜಾ ಪ್ರತಿನಿಧಿ ಕಾಯ್ದೆ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಸಿ.ಮುನಿರಾಜು ರಾಜ್ಯ ಹೈಕೋರ್ಟ್‌ನಲ್ಲಿ 2023ರ ಜೂ.6ರಂದು ಅರ್ಜಿ ಸಲ್ಲಿಸಿದ್ದು, 2023 ಜುಲೈ 3ರಂದು ಪ್ರಕರಣ ದಾಖಲಾಗಿತ್ತು.

ತಮ್ಮ ವಿರುದ್ಧ ಸಲ್ಲಿಕೆಯಾಗಿರುವ ಚುನಾವಣಾ ತಕರಾರು ಅರ್ಜಿಯನ್ನು ವಜಾಗೊಳಿಸುವಂತೆ ಶಾಸಕ ಸುಬ್ಬಾರೆಡ್ಡಿ ಹೈಕೋರ್ಟ್‌ನಲ್ಲಿ ಮನವಿ ಮಾಡಿದ್ದು, ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರಿದ್ದ ಏಕಸದಸ್ಯ ಪೀಠ ಸುಬ್ಬಾರೆಡ್ಡಿ ಅವರ ಅರ್ಜಿಯನ್ನು 2024ರ ಮಾರ್ಚ್‌ನಲ್ಲಿ ವಜಾಗೊಳಿಸಿ ವಿಚಾರಣೆ ಮುಂದುವರಿಸುವಂತೆ ಅದೇಶಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಸುಬ್ಬಾರೆಡ್ಡಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಉಜ್ವಲ್ ಬುಯ್ಯೂನ್ ಅವರು 2024ರ ಆಕ್ಟೋಬರ್ 9ರಂದು ಸುಬ್ಬಾರೆಡ್ಡಿ ಅವರ ಮೇಲ್ಮನವಿ ವಜಾಗೊಳಿಸಿ, ರಾಜ್ಯ ಹೈಕೋರ್ಟ್‌ನಲ್ಲೇ ವಿಚಾರಣೆ ಮುಂದುವರಿಸುವಂತೆ ಆದೇಶಿಸಿದ್ದರು. ಸುಪ್ರಿಂಕೋರ್ಟ್‌ನಲ್ಲಿ ಸುಬ್ಬಾರೆಡ್ಡಿ ಪರ ಕಪಿಲ್‌ಸಿಬಲ್ ವಾದಿಸಿದರೆ, ಮುನಿರಾಜು ಪರ ವಕೀಲೆ ನಳಿನಿ ಮಾಯೇಗೌಡ ವಾದಿಸಿದ್ದರು.

ನಂತರ 2024ರ ನ.22ರಂದು ರಾಜ್ಯ ಹೈಕೋರ್ಟ್‌ನ ಏಕಸದಸ್ಯ ಪೀಠದಲ್ಲಿ ವಿಚಾರಣೆ ವಜಾಗೊಳಿಸುವಂತೆ ಸುಬ್ಬಾರೆಡ್ಡಿ ಮೂರನೇ ಬಾರಿಗೆ ಸಲ್ಲಿಸಿದ್ದ ಮಧ್ಯಂತರ ಅರ್ಜಿಯೂ ತಿರಸ್ಕೃತಗೊಂಡಿತ್ತು.

ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ನಲ್ಲಿ ಸತತವಾಗಿ ಸಲ್ಲಿಸಿರುವ ಅರ್ಜಿಗಳು ವಜಾಗೊಂಡು ವಿಚಾರಣೆ ನಡೆಯುತ್ತಿರುವ ವೇಳೆಯಲ್ಲಿ ಚುನಾವಣಾ ತಕರಾರು ಅರ್ಜಿ ಸಂಬಂಧ ರಾಜ್ಯ ಹೈಕೋರ್ಟ್‌ನ ವಿಚಾರಣೆ ಆದೇಶವನ್ನು ವಜಾಗೊಳಿಸುವಂತೆ ಸುಬ್ಬಾರೆಡ್ಡಿ ದೆಹಲಿಯ ಸುಪ್ರಿಂಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೋಟೇಶ್ವರ ಸಿಂಗ್ ನೇತೃತ್ವದ ಪೀಠ, ಒಂದು ವಾರದಿಂದ ವಾದ ಮತ್ತು ಪ್ರತಿವಾದ ಆಲಿಸಿ ಸುಬ್ಬಾರೆಡ್ಡಿ ಅವರ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿ ಕರ್ನಾಟಕ ಹೈಕೋರ್ಟ್‌ನಲ್ಲೇ ವಿಚಾರಣೆ ಮುಂದುವರಿಸುವಂತೆ 2025ರ ಜ.31ರಂದು ಆದೇಶ ಮಾಡಿದೆ.

ಶಾಸಕರಿಗೆ ಸುಪ್ರೀಂಕೋರ್ಟ್‌ನಲ್ಲಿ ಮತ್ತೆ ಮುಖಭಂಗ ಉಂಟಾಗಿದೆ. ಶಾಸಕ ಸ್ಥಾನಕ್ಕೆ ಕಾನೂನಿನ ಸಂಕಷ್ಟ ಎದುರಾಗಿದ್ದು, ಹೈಕೋರ್ಟ್‌ನ ಮುಂದಿನ ಅದೇಶದವರೆಗೂ ಕಾದು ನೋಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net