ರಾಮನಗರ ಜಿಲ್ಲೆಯಲ್ಲಿ ತಲೆ ಎತ್ತಲಿವೆ ಉಪಗ್ರಾಮಗಳು

Village
Published on
ಗಂಗಾಧರ್ ಬೈರಾಪಟ್ಟಣ ರಾಮನಗರ

ದಾಖಲೆಗಳಿಲ್ಲದ ಜನವಸತಿ ಪ್ರದೇಶಗಳನ್ನು ಗ್ರಾಮಠಾಣಾ ವ್ಯಾಪ್ತಿಗೆ ಸೇರಿಸಿ ಉಪಗ್ರಾಮಗಳನ್ನು ರಚಿಸುವ ಪ್ರಯತ್ನ ಜಿಲ್ಲೆಯಲ್ಲಿ ಸದ್ದಿಲ್ಲದೆ ನಡೆದಿದೆ.

ಗ್ರಾಮಗಳಲ್ಲಿ ವಾಸ ಮಾಡುತ್ತಿದ್ದರೂ ಗ್ರಾಮಠಾಣಾ ವ್ಯಾಪ್ತಿಗೆ ಸೇರದ ಕಾರಣ ಸೂಕ್ತ ದಾಖಲೆಗಳು ಇಲ್ಲದೆ ಬಹುತೇಕ ಜನರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದರು.

ಈ ಹಿನ್ನೆಲೆಯಲ್ಲಿ 2019ರ ಅಕ್ಟೋಬರ್ 15ರಂದು ಉಪಗ್ರಾಮಗಳ ರಚನೆಗೆ ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಇದನ್ನು ಸವಾಲಾಗಿ ಸ್ವೀಕಾರ ಮಾಡಿರುವ ಜಿಲ್ಲೆಯ ಅಧಿಕಾರಿಗಳು ಮತ್ತು ಸಂಸದ ಡಿ.ಕೆ. ಸುರೇಶ್ ಉಪಗ್ರಾಮಗಳ ರಚನೆಗೆ ವೇಗ ನೀಡಿದ್ದು, ಬಹುತೇಕ ನವೆಂಬರ್ ಅಂತ್ಯಕ್ಕೆ ಜಿಲ್ಲೆಯ 676 ಗ್ರಾಮಗಳು ಉಪಗ್ರಾಮಗಳಾಗಿ ಗ್ರಾಮಠಾಣಾ ವ್ಯಾಪ್ತಿಗೆ ಸೇರ್ಪಡೆಯಾಗಲಿವೆ.

ಏತಕ್ಕೆ ಉಪಗ್ರಾಮ?

ಗ್ರಾಮ ಠಾಣೆಗೆ ಹೊಂದಿರುವ ಸರ್ವೇ ನಂ., ಖಾಸಗಿ ಜಮೀನುಗಳು ಸೇರಿ ಇತರ ಕಡೆಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡು ಹಲವಾರು ವರ್ಷಗಳಿಂದಲೂ ಜನತೆ ವಾಸ ಮಾಡುತ್ತಿದ್ದಾರೆ. ಆದರೆ ಈ ಮನೆಗಳು ಗ್ರಾಮಠಾಣಾ ವ್ಯಾಪ್ತಿಗೆ ಸೇರದ ಕಾರಣ ಗ್ರಾಮ ಪಂಚಾಯಿತಿಗಳು ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಜತೆಗೆ ತಮ್ಮದೇ ಮನೆ ಹಾಗೂ ನಿವೇಶನಗಳಿಗೆ ನಮೂನೆ 11, ಇ-ಖಾತೆ ಪಡೆಯಲು ಆಗುತ್ತಿರಲಿಲ್ಲ. ಇದರಿಂದ ಜನರಿಗೆ ಮೂಲಸೌಲಭ್ಯ ದೊರೆಯುತ್ತಿರಲಿಲ್ಲ. ಇದನ್ನು ಮನಗಂಡು ಇಂತಹ ನಿವಾಸಿಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಉಪಗ್ರಾಮಗಳ ನಿರ್ಮಾಣ ಕಾರ್ಯ ನಡೆದಿದೆ.

ಉಪಗ್ರಾಮ ರಚನೆ ಹೇಗೆ?

ಯಾವುದೇ ಒಂದು ದಾಖಲೆರಹಿತ ಜನವಸತಿ ಪ್ರದೇಶ ಮೂಲ ಗ್ರಾಮಠಾಣಾದಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಇದ್ದರೆ ಇದನ್ನು ಮೂಲ ಗ್ರಾಮದ ಭಾಗವೆಂದು ಪರಿಗಣಿಸಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 5ರಂತೆ ಉಪಗ್ರಾಮ ಎಂದು ಘೋಷಣೆ ಮಾಡಲಾಗುತ್ತದೆ. ಇದಕ್ಕೆ ಅಗತ್ಯವಾಗಿ ಬೇಕಾದ ನಕ್ಷೆ ಸಿದ್ಧಪಡಿಸಲಾಗುತ್ತದೆ. ಈ ವೇಳೆ ಜನವಸತಿ ಪ್ರದೇಶ, ರಸ್ತೆ, ಸರ್ಕಾರಿ ಶಾಲೆಗಳು, ಖಾಸಗಿ ಸ್ವತ್ತು ಇದ್ದರೂ ಇದನ್ನು ಗ್ರಾಮಠಾಣಾ ಎಂದು ಪರಿಗಣಿಸಿ, ಉಪಗ್ರಾಮವೆಂದು ಘೋಷಣೆ ಮಾಡಲಾಗುತ್ತದೆ.

ಲಾಭವೇನು?

ಉಪಗ್ರಾಮಗಳ ನಿರ್ಮಾಣದಿಂದ ಈಗಾಗಲೇ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದರೂ ಸೂಕ್ತ ರಸ್ತೆ ಇಲ್ಲದೆ, ಮನೆಗಳಿಗೆ ಇ-ಖಾತೆ, ನಮೂನೆ 11 ಸೇರಿ ಯಾವುದೇ ದಾಖಲೆಗಳು ಇಲ್ಲದೆ ಕಷ್ಟದಲ್ಲಿಯೇ ಜೀವನ ನಡೆಸುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಒಂದು ವೇಳೆ ಮನೆ /ಆಸ್ತಿ ಮಾರಾಟ ಮಾಡಬೇಕಾದರೂ ಸರ್ವೇ ನಂ. ಲೆಕ್ಕದಲ್ಲಿಯೇ ಮಾರಾಟ ಮಾಡಬೇಕಾದ ಪರಿಸ್ಥಿತಿ ಇತ್ತು. ಸರ್ಕಾರ ಸಹ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮುಂದೆ ಬರುತ್ತಿರಲಿಲ್ಲ. ಆದರೆ ಉಪಗ್ರಾಮಗಳೆಂದು ಘೋಷಣೆ ಮಾಡುವುದರಿಂದ ಇದು ಗ್ರಾಮಠಾಣಾ ವ್ಯಾಪ್ತಿಗೆ ಒಳಪಡಲಿದ್ದು, ಅಧಿಕೃತ ದಾಖಲೆಗಳು ದೊರೆಯುವ ಜತೆಗೆ, ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ದೊರೆಯಲಿದೆ.

ಸಂಸದರ ಉತ್ಸುಕತೆ

2019ರ ಅಕ್ಟೋಬರ್‌ನಲ್ಲಿ ಉಪಗ್ರಾಮಗಳ ರಚನೆಗೆ ಸರ್ಕಾರ ಆದೇಶ ಹೊರಡಿಸಿದ ಹೊರತಾಗಿಯೂ ಇದಕ್ಕೆ ಚಾಲನೆ ದೊರೆತಿರಲಿಲ್ಲ. ಆದರೆ ಸಂಸದ ಡಿ.ಕೆ. ಸುರೇಶ್ ಅವರ ಒತ್ತಾಸೆ ಫಲವಾಗಿ ಜಿಲ್ಲೆಯಲ್ಲಿ ಉಪಗ್ರಾಮ ರಚನೆಗೆ ವೇಗ ದೊರೆತಿದೆ. ಇದಕ್ಕೆ ಪೂರಕವಾಗಿ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ ಅವರು ಸಿಬ್ಬಂದಿಗೆ ಪ್ರೋತ್ಸಾಹ ನೀಡುವ ಮೂಲಕ ಮಹತ್ವದ ಯೋಜನೆಯೊಂದು ಸಾಕಾರಗೊಳ್ಳುವ ಹಂತಕ್ಕೆ ತಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 676 ಗ್ರಾಮಗಳಿಗೆ ಉಪಗ್ರಾಮಗಳ ರಚನೆಗೆ ಸಂಬಂಧ ಡಿಪಿಆರ್ ಸಿದ್ಧಪಡಿಸಲಾಗಿದ್ದು, ಈಗಾಗಲೇ ಭೂ ದಾಖಲೆಗಳ ಇಲಾಖೆ 438 ಉಪಗ್ರಾಮಗಳ ನಕ್ಷೆ ಸಿದ್ಧಗೊಳಿಸಿದೆ. ಬಹುತೇಕ ನವೆಂಬರ್ ಅಂತ್ಯಕ್ಕೆ ಉಪ ಗ್ರಾಮಗಳು ಘೋಷಣೆ ಆಗಲಿವೆ.

ಉಪಗ್ರಾಮಗಳ ರಚನೆಗೆ ಕಾರ್ಯೋನ್ಮುಖರಾಗಿದ್ದು, 676 ಗ್ರಾಮಗಳಿಗೆ ಡಿಪಿಆರ್ ಸಿದ್ಧಪಡಿಸಲಾಗಿತ್ತು. ಇದರಲ್ಲಿ 438 ಗ್ರಾಮಗಳ ನಕ್ಷೆ ಸಹ

ಪೂರ್ಣಗೊಂಡಿವೆ. ಸಂಸದ ಡಿ.ಕೆ. ಸುರೇಶ್, ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ ಅವರ ಪ್ರೋತ್ಸಾಹದೊಂದಿಗೆ ಉಪಗ್ರಾಮ ರಚನಾ ಕಾರ್ಯ ವೇಗವಾಗಿ ನಡೆಯುತ್ತಿದೆ.ಬಿ.ಆರ್.ಹನುಮೇಗೌಡ, ಉಪನಿರ್ದೇಶಕರು, ಭೂ ದಾಖಲೆಗಳ ಇಲಾಖೆ, ರಾಮನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net