

ಕುಂದಾಪುರ: ಗ್ರಾಮೀಣ ಭಾಗದ ಜನರ ಆರೋಗ್ಯ ಹಿತದೃಷ್ಟಿಯಿಂದ ಆರಂಭಿಸಲಾದ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ವ್ಯಾಪ್ತಿಯ ಹೆಮ್ಮಾಡಿಯಲ್ಲಿರುವ ಉಪ ಆರೋಗ್ಯ ಕೇಂದ್ರವನ್ನು ಕಳೆದ 3-4 ತಿಂಗಳಿಂದ ಸಿಬ್ಬಂದಿ ಕೊರತೆಯಿಂದ ಮುಚ್ಚಲಾಗಿದೆ. ವಾರಕ್ಕೊಮ್ಮೆ ವಾತ್ರ ಬೇರೆಡೆಯ ಸಿಎಚ್‌ಒ ಇಲ್ಲಿಗೆ ಬರುತ್ತಿದ್ದು, ಉಳಿದ ದಿನಗಳಲ್ಲಿ ಉಪಕೇಂದ್ರ ಮುಚ್ಚಿರುತ್ತದೆ. ಇದರಿಂದ ಹಿರಿಯರು, ಗರ್ಭಿಣಿಯರಿಗೆ ತೊಂದರೆಯಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಪ್ರತಿ ಐದು ಸಾವಿರ ಜನರಿಗೆ ಒಂದರಂತೆ ಅಲ್ಲಲ್ಲಿ ಉಪ ಆರೋಗ್ಯ ಕೇಂದ್ರ ಆರಂಭಿಸಲಾಗಿದೆ. ಆದರೆ ಹೆಮ್ಮಾಡಿಯಲ್ಲಿ ಸಿಎಚ್‌ಒ ಹಾಗೂ ಪಿಎಚ್‌ಒ ಎರಡೂ ಹುದ್ದೆ ಭರ್ತಿಯಾಗದೆ ಇರುವುದರಿಂದ ಕಳೆದ 3 ತಿಂಗಳಿಂದ ಉಪ ಆರೋಗ್ಯ ಕೇಂದ್ರ ಜನರ ಸೇವೆಗೆ ಲಭ್ಯವಿಲ್ಲ.
ಉಪ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಎಚ್‌ಒ (ಸಮುದಾಯ ಆರೋಗ್ಯ ಅಧಿಕಾರಿ)ಗಳಿಗೆ ಆಯಾ ಗ್ರಾಮದ ವ್ಯಾಪ್ತಿಯಲ್ಲಿ ಸಾಕಷ್ಟು ಜವಾಬ್ದಾರಿಗಳಿರುತ್ತವೆ. ಮುಖ್ಯವಾಗಿ ಮನೆ ಮನೆಗಳಿಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು, ಸಾಂಕ್ರಾಮಿಕ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸುವುದು, ಸಣ್ಣಪುಟ್ಟ ಕಾಯಿಲೆಗಳಿದ್ದರೆ ಅಲ್ಲೇ ಚಿಕಿತ್ಸೆ ಕೊಡುವುದು, ಗರ್ಭಿಣಿಯರ ದಾಖಲಾತಿ, ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು, ಮಕ್ಕಳಿಗೆ ಚುಚ್ಚುಮದ್ದು ಲಸಿಕೆ ನೀಡುವುದು, ತಮ್ಮ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರ ಮೇಲ್ವಿಚಾರಣೆ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ಸೇರಿದಂತೆ ಇನ್ನಿತರ ಆರೋಗ್ಯ ಸೇವೆಗಳನ್ನು ನೀಡುವ ಕರ್ತವ್ಯ ಸಿಎಚ್‌ಒ ಅವರದ್ದು. ಇವರಿಗೆ ಕೇಂದ್ರದ ಪಿಎಚ್‌ಒ (ಪ್ರಾಥಮಿಕ ಆರೋಗ್ಯ ಅಧಿಕಾರಿ) ಸಹಕಾರ ನೀಡುತ್ತಾರೆ. ಹೆಮ್ಮಾಡಿಯಲ್ಲಿರುವ ಉಪ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಈ ಭಾಗದ ಜನರಿಗೆ ಆರೋಗ್ಯ ಸೇವೆ ಸಮರ್ಪಕವಾಗಿ ಸಿಗುತ್ತಿಲ್ಲ. ವಾರಕ್ಕೊಮ್ಮೆ ಬೇರೆ ಕಡೆಯಿಂದ ಬರುವ ಆರೋಗ್ಯ ಅಧಿಕಾರಿಗೆ ಹೆಚ್ಚಿನ ಹೊರೆ ನಿಭಾಯಿಸುವುದೂ ಕಷ್ಟಕರವಾಗಿದೆ. ಅಗತ್ಯ ಸಿಬ್ಬಂದಿಯನ್ನು ನೇಮಿಸಿ ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಸಂಬಂಧಪಟ್ಟ ಇಲಾಖೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹೆಮ್ಮಾಡಿ ಉಪ ಆರೋಗ್ಯ ಕೇಂದ್ರದಲ್ಲಿ ಈ ಹಿಂದೆ ಇದ್ದ ಸಿಎಚ್‌ಒ ಅವರು ವೈಯಕ್ತಿಕ ಕಾರಣದಿಂದ 3-4 ತಿಂಗಳ ಹಿಂದೆ ರಾಜೀನಾಮೆ ನೀಡಿದ್ದರು. ಇದರೊಂದಿಗೆ ಪಿಎಚ್‌ಒ ಹುದ್ದೆ ಬಹಳ ಸಮಯದಿಂದ ಖಾಲಿಯಿದೆ. ಪ್ರಸ್ತುತ ಎರಡೂ ಹುದ್ದೆಯೂ ಖಾಲಿ ಇರುವುದರಿಂದ ಕಟ್‌ಬೆಲ್ತೂರಿನ ಸಿಎಚ್‌ಒ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಅವರು ವಾರದಲ್ಲಿ ಬುಧವಾರ ಅಥವಾ ಶುಕ್ರವಾರ ಒಂದು ದಿನ ಇಲ್ಲಿಗೆ ಆಗಮಿಸಿ, ಆರೋಗ್ಯ ಸೇವೆ ನೀಡುತ್ತಿದ್ದಾರೆ.
ನಮ್ಮಲ್ಲಿನ ಉಪ ಆರೋಗ್ಯ ಕೇಂದ್ರ ಕಳೆದ 3-4 ತಿಂಗಳಿಂದ ಬಂದ್ ಆಗಿದೆ. ಇದರಿಂದ ವೃದ್ಧರಿಗೆ, ಗರ್ಭಿಣಿಯರಿಗೆ ತುಂಬಾ ತೊಂದರೆಯಾಗುತ್ತಿದೆ. ಮುಖ್ಯವಾಗಿ ಬ್ಯಾಂಡೇಜ್ ಹಾಕಿರುವ ಗಾಯಾಳುಗಳ ಚಿಕಿತ್ಸೆ, ಬ್ಯಾಂಡೇಜ್ ಬದಲಾವಣೆ ಇನ್ನಿತರ ಆರೋಗ್ಯ ಸೇವೆಗಳು ಇಲ್ಲಿನ ಜನರಿಗೆ ವ್ಯತ್ಯಯ ಆಗುತ್ತಿದೆ. ಆದಷ್ಟು ಬೇಗ ಇಲ್ಲಿಗೆ ಶಾಶ್ವತ ಸಿಎಚ್‌ಒ ನೇಮಕ ಮಾಡಬೇಕು. -ಯು.ಸತ್ಯನಾರಾಯಣ ರಾವ್, ವಾಜಿ ಅಧ್ಯಕ್ಷ, ಹೆಮ್ಮಾಡಿ ಗ್ರಾ.ಪಂ. ಸಿಎಚ್‌ಒ, ಪಿಎಚ್‌ಒ ನೇಮಕಾತಿ ಸರ್ಕಾರದ ಮಟ್ಟದಲ್ಲಿಯೇ ಆಗಬೇಕು. ಇಲ್ಲಿರುವವರು ಬಿಟ್ಟು ಬೇರೆ ಕಡೆಗೆ ಹೋಗಿದ್ದಾರೆ. ಸದ್ಯಕ್ಕೆ ಜನರಿಗೆ ತೊಂದರೆಯಾಗದಂತೆ ವಾರದಲ್ಲಿ ಒಂದು ದಿನ ಬೇರೆಡೆಯಿಂದ ಆರೋಗ್ಯ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 42 ಸಿಎಚ್‌ಒ, 42 ಪಿಎಚ್‌ಒ ಹುದ್ದೆಗಳು ಖಾಲಿ ಇವೆ. ಹುದ್ದೆ ಭರ್ತಿಗಾಗಿ ಆರೋಗ್ಯ ಸಚಿವರಿಗೆ, ಇಲಾಖೆ ಆಯುಕ್ತರಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ. -ಡಾ.ಬಸವರಾಜ ಹುಬ್ಬಳ್ಳಿ, ಡಿಎಚ್‌ಒ, ಉಡುಪಿ