ಮೌಢ್ಯ ನಿರ್ಮೂಲನೆ ಅಗತ್ಯ: ಸಿಪಿಐ ವಸಂತ ಅಸೋಡೆ ಅಭಿಮತ

292
Published on

ಮೊಳಕಾಲ್ಮೂರು: ಮೌಢ್ಯ, ಕಟ್ಟುಪಾಡುಗಳು, ಅವೈಜ್ಞಾನಿಕ ಆಚರಣೆಗಳನ್ನು ಬೇರು ಸಹಿತ ಕಿತ್ತೊಗೆಯಬೇಕೆಂದು ಸಿಪಿಐ ವಸಂತ ವಿ.ಅಸೋಡೆ ಹೇಳಿದರು.

ತಾಲೂಕಿನ ಕೋನಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶಿಶು ಅಭಿವೃದ್ಧಿ ಇಲಾಖೆ, ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ನಿಷೇಧ, ಜೀತ ಪದ್ಧತಿ ಕಡಿವಾಣ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಹಮ್ಮಿಕೊಂಡಿದ್ದ ಜನ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಬಾಲ್ಯ ವಿವಾಹ, ಮಕ್ಕಳನ್ನು ಶಾಲೆ ಬಿಡಿಸಿ ಕಂಡವರ ಮನೆಯಲ್ಲಿ ಜೀತಕ್ಕೆ ಇಡುವುದು ಸೇರಿ ಯಾರಾದರೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಕೈಹಾಕಿದರೆ ಅದು ತಪ್ಪು ಎಂದು ಬುದ್ಧಿಮಾತು ಹೇಳುವ ಮೂಲಕ ಸರಿದಾರಿಗೆ ತರುವಂತ ಕೆಲಸವಾಗಬೇಕು ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ನವೀನ್‌ಕುಮಾರ ಮಾತನಾಡಿ, ಮಕ್ಕಳ ಹಕ್ಕುಗಳ ಪರಿಪಾಲನೆ ಮತ್ತು ಅವರ ಸಮಗ್ರ ಶಿಕ್ಷಣದ ಉಚಿತ ನೆರವನ್ನು ಸಮರ್ಥವಾಗಿ ಬಳಸಿಕೊಳ್ಳಲು ಗ್ರಾಮೀಣ ಪ್ರದೇಶದ ಜನರು ಹೆಚ್ಚಿನ ಒಲವು ತೋರಬೇಕು. ಮನೆಯ ಮಕ್ಕಳಿಗೆ ಶಿಕ್ಷಣವೇ ಭೂಷಣ. ಒಬ್ಬ ವಿದ್ಯಾವಂತ ಇದ್ದರೆ ಉತ್ತಮ ನಾಗರಿಕತೆಯ ದೀಪ ಇದ್ದಂತೆ. ಕೆಟ್ಟ ಆಚಾರ-ವಿಚಾರಗಳಿಗೆ ಆಸ್ಪದ ಕೊಡಬಾರದು ಎಂದು ತಿಳಿಸಿದರು.

ಬಾಲ್ಯ ವಿವಾಹದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಆರೋಗ್ಯ ಸಹಾಯಕಿಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಅರಿವು ಮೂಡಿಸಿದ ಮೇಲೂ ಕೆಟ್ಟ ದಾರಿ ತುಳಿದರೆ ಮಕ್ಕಳ ಜೀವಕ್ಕೆ ಕಂಟಕ ತಂದೊಡ್ಡಬಹುದು. ಈ ಸತ್ಯವನ್ನು ಅರಿತರೆ ಬದುಕು ಸಾರ್ಥಕವಾಗಲಿದೆ. ಮಕ್ಕಳು ತಂದೆ, ತಾಯಿಗಳಿಗೆ ಮನದಟ್ಟು ಮಾಡಬೇಕು ಎಂದರು.

ಮಕ್ಕಳ ಹಕ್ಕುಗಳ ರಕ್ಷಣಾ ಘಟಕ ಜಿಲ್ಲಾ ನೋಡೆಲ್ ಅಧಿಕಾರಿ ಸಂತೋಷ್, ಶಿಕ್ಷಕರಾದ ರಾಜಗೋಪಾಲ, ಶಿವರಾಜ್, ನವೀನ್, ಅಂಗನವಾಡಿ ಕಾರ್ಯಕರ್ತೆಯರಾದ ಪಂಕಜಾಕ್ಷಿ, ಕಮಲಮ್ಮ, ಶಿವಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net