

ನಂಜನಗೂಡು: ಭಾಷೆ ಮತ್ತು ಭಾವನೆಗಳ ಸಂಗಮದ ಜ್ಞಾನಾರ್ಜನೆಗೆ ಮಾನವಿಕ ಶಾಸ್ತ್ರಗಳ ಅಧ್ಯಯನ ಸಾರ್ವಕಾಲಿಕ ಅಗತ್ಯ ಎನಿಸಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪ್ರೊ.ಡಿ.ಆನಂದ್ ಅಭಿಪ್ರಾಯಪಟ್ಟರು.
ಪಟ್ಟಣದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಕಲಿಸುವ ಮತ್ತು ಕಲಿಯುವ ಪ್ರಕ್ರಿಯೆಯು ಯಾಂತ್ರಿಕವಾಗಿದ್ದು, ಜ್ಞಾನ, ಅರಿವು, ನಡತೆ ಮತ್ತು ಕೌಶಲಗಳೊಂದಿಗಿನ ಅಧ್ಯಯನವು ಪ್ರಸ್ತುತವಾಗಿದೆ ಎಂದರು.
ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ನಿರ್ದೇಶಕ ಪ್ರೊ. ಎಂ. ನೀಲಗಿರಿ ತಳವಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಆಯೋಜಿಸುತ್ತಿರುವ ವಿಚಾರ ಸಂಕಿರಣಗಳ ಉದ್ದೇಶ ಸಾಕಾರವಾಗಬೇಕಿದಲ್ಲಿ ಮಾನವಿಕ ಶಾಸ್ತ್ರದ ಪ್ರಾಮುಖ್ಯವನ್ನು ಅರಿತು ಪರಿಣಾಮಕಾರಿಯಾದ ಭಾಷಾ ಸಂವಹನ ಕಲೆಯನ್ನು ರೂಢಿಸಿಕೊಂಡು ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆಯಂತೆ ವಿದ್ಯಾರ್ಥಿಗಳನ್ನು ಪರಿಸರ ಪ್ರೇಮಿ ಮತ್ತು ವಿಶ್ವಮಾನವರನ್ನಾಗಿಸುವ ಜವಾಬ್ದಾರಿ ಅಧ್ಯಾಪಕರದ್ದಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಸ್.ಹೊನ್ನೇಗೌಡರು ಮಾತನಾಡಿ, ಕಾಲಕಾಲಕ್ಕೆ ಜರುಗುವ ವಿಚಾರ ಸಂಕಿರಣಗಳು ಹಾಗೂ ಸಮಾವೇಶಗಳು ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಸಿಗುವ ಸೃಜನಶೀಲ ಹಾಗೂ ನೈತಿಕತೆ ಆಧಾರಿತ ಉಪನ್ಯಾಸಗಳು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಕಲಿಕಾ ಮತ್ತು ಅರಿವಿನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕರಾದ ಪ್ರೊ.ಆರ್.ಮೋಗೇಶಪ್ಪ ಮಾತನಾಡಿ, ಕಲಿಕೆ ನಿತ್ಯ ನಿರಂತರವಾಗಿದ್ದು, ಪ್ರಸ್ತುತ ಸಂದರ್ಭದಲ್ಲಿ ಮಾನವಿಕ ಶಾಸ್ತ್ರಗಳ ಕಲಿಕೆ ತುಂಬ ಅವಶ್ಯಕವಾಗಿದ್ದು, ಇಂತಹ ವಿಚಾರ ಸಂಕಿರಣಗಳು ಆಧ್ಯಾಪಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವೈಚಾರಿಕ ನೆಲೆಗಟ್ಟಿನಲ್ಲಿ ವಿಷಯವನ್ನು ಗ್ರಹಿಸಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ಅರ್ಥಪೂರ್ಣವಾಗುತ್ತವೆ ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಸಿ.ನಾಗಣ್ಣ, ಬೆಂಗಳೂರು ವಿವಿ ಇಂಗ್ಲಿಷ್ ಪ್ರಾಧ್ಯಾಪಕ ಬಿ.ಎಂ. ಕೀರ್ತಿ, ವಿಶ್ರಾಂತ ಕುಲಪತಿ ಡಾ.ನಾಗೇಂದ್ರ ಪರಷರ್, ಲೆಕ್ಕಪರಿಶೋಧಕ ಆರ್.ಗೋವರ್ಧನ್, ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಶಿವಕುಮಾರ್ ಹಾಗೂ ನಂಜನಗೂಡಿನ ಪುರಸಭಾ ಮಾಜಿ ಅಧ್ಯಕ್ಷ ಆರ್.ವಿ.ಮಹದೇವಸ್ವಾಮಿ, ಕುಮಾರಿ ಸ್ನೇಹ, ಸಂಚಾಲಕ ಎಸ್. ಪರಶಿವ, ಎಚ್.ಆರ್.ಗುರು, ಎಂ.ಎನ್. ಜಯಶೀಲಾ, ಕೆ.ವಿ.ಸುಂದರರಾಜು, ಡಾ.ಬಿ.ಕೆ.ಕೆಂಡಗಣ್ಣಸ್ವಾಮಿ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.