

ಚಿತ್ರದುರ್ಗ: ಸರ್ಕಾರಿ, ಖಾಸಗಿ ಸಂಸ್ಥೆ ಇರಲಿ ಅಥವಾ ಸ್ವಯಂ ಉದ್ಯೋಗದಲ್ಲಿ ಯಶಸ್ಸು ಸಾಧಿಸಲು ಸಾಮರ್ಥ್ಯ ಹಾಗೂ ಕೌಶಲ ಬಹಳ ಅಗತ್ಯ ಎಂದು ಸಂಪನ್ಮೂಲ ವ್ಯಕ್ತಿ ಮುನಿರಾಜು ಹೇಳಿದರು.
ನಗರದ ಸರ್ಕಾರಿ ವಿಜ್ಞಾನ ಕಾಲೇಜ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸ್ಪರ್ಧಾತ್ಮಕ ಕಾರ್ಯಾಗಾರದಲ್ಲಿ ಮಾತನಾಡಿ, ಯಾವ ಪುಸ್ತಕ ಮತ್ತು ಎಷ್ಟು-ಯಾವ ಸಮಯ ಓದಬೇಕೆಂಬ ಜ್ಞಾನ ಅಗತ್ಯ.
ಅನಗತ್ಯ ಪುಸ್ತಕಗಳ ಓದು ಜ್ಞಾನ, ಉದ್ಯೋಗ ತಂದುಕೊಡುವುದಿಲ್ಲ. ಆದ್ದರಿಂದ ಓದಿನಲ್ಲಿ ಬುದ್ಧಿವಂತಿಕೆ ಪ್ರದರ್ಶಿಸಬೇಕು ಎಂದರು.
ಹದಿಹರೆಯದಲ್ಲಿ ಬೌದ್ಧಿಕ ಪ್ರಬುದ್ಧತೆ ಜತೆಗೆ ಮಾನಸಿಕ ಪ್ರಕ್ರಿಯೆಗಳು ಹೆಚ್ಚು ವಿಶ್ಲೇಷಣಾತ್ಮಕವಾಗುತ್ತವೆ. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸ್ಪಷ್ಟ ಅಭಿವ್ಯಕ್ತಿ ಮತ್ತು ಸ್ವತಂತ್ರ ಆಲೋಚನೆಯನ್ನು ಕೌಶಲ ಕಲಿಸುತ್ತದೆ ಹೇಳಿದರು.
ಜ್ಞಾನ, ಕೌಶಲ, ಸೃಜನಶೀಲತೆ ಜತೆಗೂಡಿ ಕಾರ್ಯಪ್ರವೃತ್ತರಾದರೆ ಮಾತ್ರ ಸಾಧನೆ ಸಾಧ್ಯ. ಶಿಕ್ಷಣದಲ್ಲಿ ಕೌಶಲ ಬೆರೆತಾಗ ಜಗತ್ತಿನಲ್ಲಿ ತಮ್ಮನ್ನು ತಾವು ಗುರುತಿಸಲ್ಪಡುವಂತಾಗುತ್ತದೆ ಎಂದರು.
ಕೌಶಲಾಧಾರಿತ ಶಿಕ್ಷಣದ ಆಯ್ಕೆ
ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಶಿವಕುಮಾರ್ ಮಾತನಾಡಿ, ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ಧೈರ್ಯ, ಸ್ಥೈರ್ಯ ಕೌಶಲಾಧಾರಿತ ಶಿಕ್ಷಣದಿಂದ ಸಿಗುತ್ತದೆ.
ಉದ್ಯೋಗ ಅರಸುವ ಹಂತ ಪ್ರಾರಂಭವಾಗುವಾಗಲೇ ಕೌಶಲಾಧಾರಿತ ಶಿಕ್ಷಣವನ್ನು ವಿದ್ಯಾರ್ಥಿಗಳಲ್ಲಿ ಸ್ವಇಚ್ಛಾನುಸಾರ ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪ್ರತಿ ವಿದ್ಯಾರ್ಥಿಯೂ ಜೀವನದಲ್ಲಿ ಯಶಸ್ಸಿನ ಕನಸು ಕಾಣುತ್ತಿರುತ್ತಾನೆ. ಯಶಸ್ಸಿನ ಮೆಟ್ಟಿಲೇರಬೇಕಾದರೆ ಕಠಿಣ ಶ್ರಮ, ನಿರಂತರ ಸಾಧನೆ, ಹಂಬಲ, ತುಡಿತ ಬಹುಮುಖ್ಯ ಎಂದರು.
ಕೌಶಲಾಭಿವೃದ್ಧಿ ಬಗ್ಗೆಯೂ ಚಿಂತನೆ ಮಾಡಬೇಕು. ಆಗ ಮಾತ್ರ ಹೊಸ-ಹೊಸ ಮಜಲುಗಳಲ್ಲಿ ಉದ್ಯೋಗದ ಮಾರ್ಗ ಕಂಡುಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.
ಪ್ರಾಧ್ಯಾಪಕ ಡಿ.ನಾಗರಾಜ್, ಜಂಬೂದ್ವೀಪ ಸಂಸ್ಥೆ ಅಧ್ಯಕ್ಷ ರಾಮಣ್ಣ, ಕಾರ್ಯದರ್ಶಿ ಟಿ.ಶ್ರೀನಿವಾಸ್, ಸಂಪನ್ಮೂಲ ವ್ಯಕ್ತಿ ರಘುವಿಕಾಸ್, ಕೃಷಿ ಇಲಾಖೆ ಅಧಿಕಾರಿ ಪಾರ್ವತಮ್ಮ ಇತರರು ಉಪಸ್ಥಿತರಿದ್ದರು.
ಜಂಬೂದ್ವೀಪ ಸಂಸ್ಥೆ, ಮಹಾತ್ಮ ಫುಲೆ ಅಧ್ಯಯನ ಕೇಂದ್ರ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.