

ಗದಗ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪೂರಕ ವಾತಾವರಣ ನಿರ್ಮಿಸಲು ಯೋಜನೆಗಳನ್ನು ರೂಪಿಸುವ ಕುರಿತು ಆಳವಾದ ಅಧ್ಯಯನ ಮಾಡಿ ವರದಿ ಸಿದ್ಧಪಡಿಸಲಾಗುವುದು ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ನಗರದ ರೈತರ ಭವನದಲ್ಲಿ ಸೋಮವಾರ ಜರುಗಿದ ಗದಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯನ್ನು ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಮಗ್ರ ಹಾಗೂ ತಳಮಟ್ಟದಲ್ಲಿ ಅಧ್ಯಯನ ಮಾಡಿ ಉತ್ತಮ ವರದಿಯನ್ನು ಒಂದು ತಿಂಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸಲು ಅಧಿಕಾರಿಗಳಿಗೆ ತಿಳಿಸಿದರು.
ಗದಗ ಜಿಲ್ಲೆಯನ್ನು ಪ್ರಮುಖ ಪ್ರವಾಸಿ ತಾಣವಾಗಿಸಲು ಪೂರಕ ವಾತಾವರಣವಿದೆ. ಇರುವ ಸಂಪನ್ಮೂಲ ಸಮರ್ಪಕವಾಗಿ ಬಳಸಿ ಜಿಲ್ಲೆಯನ್ನು ಪ್ರಮುಖ ಪ್ರವಾಸಿ ತಾಣವಾಗಿಸೋಣ ಎಂದರು.
ಈಗಾಗಲೇ ರಚಿಸಲಾದ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯು ಜಿಲ್ಲೆಯಲ್ಲಿರುವ ವಾಸ್ತುಶಿಲ್ಪಕ್ಕೆ ಪ್ರಸಿದ್ಧಿ ಪಡೆದ ಲಕ್ಕುಂಡಿ, ಹರ್ತಿ, ಡಂಬಳ, ಹುಲಕೋಟಿ ಸೇರಿ ಇತರ ಸ್ಥಳಗಳು ಐತಿಹಾಸಿಕ ದೇವಾಲಯಗಳನ್ನು ಹೊಂದಿದ್ದು, ಈ ಕುರಿತು ಆಳವಾದ ಅಧ್ಯಯನದ ಅವಶ್ಯಕತೆ ಇದೆ. ದೇಶದಲ್ಲೇ ಶುದ್ಧ ಗಾಳಿಗೆ ಗದಗ ಜಿಲ್ಲೆ ಹೆಸರುವಾಸಿಯಾಗಿದೆ. ಅದೇ ರೀತಿ ಶಿರಹಟ್ಟಿ ಮತ್ತು ಅಂತೂರು ಬೆಂತೂರು ಭಾವೈಕ್ಯ ಕೇಂದ್ರಗಳು ಮಾದರಿಯಾಗಿವೆ ಎಂದರು.
ರೋಣ, ಗಜೇಂದ್ರಗಡ, ನರಗುಂದ, ಶ್ರೀಮಂತಗಢ ಕೋಟೆಗಳು ಐತಿಹಾಸಿಕ ಚಾರಿತ್ರ್ಯ ಸಾರುವ ಕೋಟೆಗಳಾಗಿವೆ. ಹತ್ತಿರದ ಕಪ್ಪತಗುಡ್ಡ ಔಷಧ ಗುಣವುಳ್ಳ ಸಸ್ಯ ಸಂಪತ್ತನ್ನು ತನ್ನ ಒಡಲಲ್ಲಿ ಅಡಗಿಸಿಕೊಂಡು ಸಹ್ಯಾದ್ರಿಯಾಗಿದೆ. ಬಿಂಕದಕಟ್ಟಿಯಲ್ಲಿ ಇರುವ ಪ್ರಾಣಿ ಸಂಗ್ರಹಾಲಯವು ನಿರಂತರವಾಗಿ 50 ವರ್ಷ ಪೂರೈಸಿ ಸುವರ್ಣ ಸಂಭ್ರಮ ಆಚರಣೆ ಮಾಡಿದೆ. ಈ ಸಂಗ್ರಹಾಲಯವು ಇನ್ನೂ ಹೆಚ್ಚಿನ ಜನರನ್ನು ಆಕರ್ಷಿಸುವಂತಾಗಬೇಕು. ನಗರದ ಭೀಷ್ಮಕೆರೆ, ಜುಮ್ಮಾ ಮಸೀದಿ, ತಿರಂಗಾ ಪಾರ್ಕ್ , ಬೆಟಗೇರಿಯ ತಾರಾಲಯ, ಪ್ರಾಚ್ಯ ವಸ್ತು ಸಂಗ್ರಹಾಲಯ, ನೇಕಾರಿಕೆ ಇವೆಲ್ಲವುಗಳು ಪ್ರವಾಸಿಗರ ಆಕರ್ಷಣೆಗೆ ಪೂರಕವಾಗಿವೆ. ಇವುಗಳನ್ನು ಸೇರಿದಂತೆ ಜಿಲ್ಲೆಯ ಅನೇಕ ತಾಣಗಳನ್ನು ಅಭಿವೃದ್ಧಿಪಡಿಸಲು ರಚಿಸಲಾದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯು ಸರಿಯಾಗಿ ಅಧ್ಯಯನ ಕಾರ್ಯನಿರ್ವಹಿಸಿ ಅಭಿವೃದ್ಧಿಗೆ ಶೀಘ್ರ ಶಿಫಾರಸುಗಳನ್ನು ಮಾಡಬೇಕು ಎಂದು ಹೇಳಿದರು.
ಗದಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಹಿರಿಯ ಐಎಎಸ್ ಅಧಿಕಾರಿ ಮನೋಜ ಕುಮಾರ, ಕಾರ್ಯದರ್ಶಿಯಾಗಿ ಜಿ. ಜಗದೀಶ, ಸದಸ್ಯರಾಗಿ ಮಂಜುನಾಥ ಚವ್ಹಾಣ, ಜೆ.ಕೆ. ಜಮಾದಾರ, ವಿವೇಕಾನಂದಗೌಡ ಪಾಟೀಲ, ಡಾ. ಎಸ್. .ಜಿ. ಚಲವಾದಿ, ಕಿಶೋರ ಬಾಬು ನಾಗರಕಟ್ಟೆ, ಎ. ದೇವರಾಜ, ಎಫ್.ಎನ್. ಹುಡೇದ ಸೇರಿ ಒಟ್ಟು 16 ತಜ್ಞರು ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಸಮಿತಿಯು ಸರಿಯಾಗಿ ಅಧ್ಯಯನ ಮಾಡಿ ಶಿಫಾರಸುಗಳನ್ನು ಮಾಡಬೇಕು. ನಂತರ ಅದನ್ನು ಶಿಸ್ತು ಬದ್ಧವಾಗಿ ಅನುಷ್ಠಾನಗೊಳಿಸಬೇಕು. ನಿಮ್ಮ ವರದಿ ಶ್ರೇಷ್ಠವಾಗಿರಲಿದೆ ಎಂಬ ವಿಶ್ವಾಸ ನಮ್ಮದು. ಜಿಲ್ಲೆಯನ್ನು ಪ್ರಮುಖ ಪ್ರವಾಸಿ ತಾಣವಾಗಿಸುವಲ್ಲಿ ಸಮಿತಿಯು ಕಾರ್ಯೋನ್ಮುಖವಾಗಲಿ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಸಿಇಒ ಸುಶೀಲಾ ಬಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಉಪವಿಭಾಗಾಧಿಕಾರಿ ಅನ್ನಪೂರ್ಣ ಎಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ, ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಇದ್ದರು.