ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು

16Kush02
ಕುಶಾಲನಗರ ಸಮೀಪದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಲಾಯಿತು. ಮಕ್ಕಳು ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳ ಪ್ರದರ್ಶನ ನಡೆಯಿತು. ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಡಾ. ಸದಾಶಿವಯ್ಯ ಪಲ್ಲೇದ್, ದಯಾನಂದ ಪ್ರಕಾಶ್, ಬಿ.ಡಿ.ರಮ್ಯಾ, ಸುಜಾತಾ, ಗೀತಾ, ರೇಖಾ ಇದ್ದರು.
Published on

ಕುಶಾಲನಗರ: ಸಮೀಪದ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್, ಎನ್‌ಎಸ್‌ಎಸ್ ಘಟಕದ ವತಿಯಿಂದ ಶನಿವಾರ ಗ್ರಾಮೀಣ ಪರಿಸರ ಸ್ನೇಹಿ ಗಣೇಶೋತ್ಸವ ಜಾಗೃತಿ ಅಭಿಯಾನ ನಡೆಯಿತು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶಾಲಾ ಶಿಕ್ಷಣ ಇಲಾಖೆ, ಶಾಲಾ ಎಸ್‌ಡಿಎಂಸಿ, ವಿದ್ಯಾರ್ಥಿ ಸಂಘ, ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಹಯೋಗದೊಂದಿಗೆ ನಮ್ಮ ನಡಿಗೆ ಹಸಿರೆಡೆಗೆ ಅಭಿಯಾನದಡಿ ಮಣ್ಣಿನ ಗಣೇಶ ಬಳಸಿ- ಜಲಮಾಲಿನ್ಯ ತಡೆಯಿರಿ ಕುರಿತು ನಡೆದ ಪರಿಸರ ಜಾಗೃತಿ ಆಂದೋಲನದಲ್ಲಿ ವಿದ್ಯಾರ್ಥಿಗಳು ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಪ್ರದರ್ಶಿಸಿ ಕೂಡ್ಲೂರು ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸಿದರು.

ಗಣೇಶ ಚತುರ್ಥಿ ಸಂದರ್ಭದಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯ ಮಹತ್ವ ಕುರಿತು ಮಾಹಿತಿ ನೀಡಿದ ಶಾಲಾ ಮುಖ್ಯ ಶಿಕ್ಷಕ ಮತ್ತು ಪರಿಸರ ಕಾರ್ಯಕ್ರಮ ಸಂಘಟಕ ಟಿ.ಜಿ.ಪ್ರೇಮಕುಮಾರ್, ಪಿಒಪಿ ರಾಸಾಯನಿಕ ಬಣ್ಣದ ಗಣೇಶಮೂರ್ತಿಗಳಿಂದ ಜಲಮಾಲಿನ್ಯ ಉಂಟಾಗುತ್ತದೆ. ಇದರಿಂದ ನೀರಿನ ಮೂಲಗಳು ಅಶುದ್ಧವಾಗುತ್ತದೆ. ನೀರಿನ ಮೂಲಗಳನ್ನು ಸಂರಕ್ಷಣೆ ಮಾಡುವ ಮೂಲಕ ನಾವೆಲ್ಲರೂ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ಎಂದರು.
ವಿದ್ಯಾರ್ಥಿಗಳು ಸ್ವತಃ ಪರಿಸರಸ್ನೇಹಿ ಗಣೇಶನನ್ನು ತಯಾರಿಸಿ ಹಸಿರು ಗಣೇಶೋತ್ಸವ ಆಚರಿಸುವ ಕುರಿತು ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ದೈಹಿಕ ಶಿಕ್ಷಣಾಧಿಕಾರಿ ಡಾ.ಸದಾಶಿವಯ್ಯ ಎಸ್.ಪಲ್ಲೇದ್ ಮಾತನಾಡಿ, ನಾಡಿನಲ್ಲಿ ಭಾವೈಕ್ಯ ಬೆಳೆಸಲು ಸಹಕಾರಿಯಾಗಿರುವ ಗಣೇಶೋತ್ಸವದಲ್ಲಿ ನಾವು ಯಾವುದೇ ಕಾರಣಕ್ಕೂ ಪರಿಸರಕ್ಕೆ ಧಕ್ಕೆಯನ್ನುಂಟು ಮಾಡದೆ ಪ್ರಕೃತಿಗೆ ಪೂರಕವಾದ ಆಚರಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಂ.ಟಿ.ದಯಾನಂದ ಪ್ರಕಾಶ್ ಮಾತನಾಡಿ, ನಾವು ಮಾಲಿನ್ಯ ರಹಿತ ಹಬ್ಬದ ಆಚರಣೆಗಳಿಗೆ ಒತ್ತು ನೀಡಬೇಕು ಎಂದರು.

ಇಕೋ ಕ್ಲಬ್ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯಾ, ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯ ಮಹತ್ವ ತಿಳಿಸಿದರು. ಶಿಕ್ಷಕರಾದ ಬಿ.ಎನ್.ಸುಜಾತಾ, ಎಸ್.ಎಂ.ಗೀತಾ, ಬಿ.ಎಸ್.ಅನ್ಸಿಲಾ ರೇಖಾ, ಎಂ.ಉಷಾ, ವಿದ್ಯಾರ್ಥಿ ಸಂಘದ ನಾಯಕಿ ಐಶ್ವರ್ಯಾ, ಉಪ ನಾಯಕ ಗೌತಮ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸ್ಥಳೀಯರು ಇದ್ದರು.

ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸೋಣ ಬನ್ನಿ, ಬಣ್ಣದ ಗಣೇಶ ತ್ಯಜಿಸಿ, ಪರಿಸರ ಸಂರಕ್ಷಿಸಿ, ಮಣ್ಣಿನ ಗಣಪ ಬಳಸಿ-ಜಲಮಾಲಿನ್ಯ ತಡೆಯಿರಿ, ಬೇಡ ಬೇಡ ವಿಷಕಾರಿ ರಾಸಾಯನಿಕ ಬಣ್ಣದ ಗಣೇಶ ಬಳಕೆ ಬೇಡ ಎಂಬಿತ್ಯಾದಿ ಘೋಷಣೆಗಳನ್ನು ಪ್ರಚುರ ಪಡಿಸುವ ಮೂಲಕ ಜನಜಾಗೃತಿ ಮೂಡಿಸಿ ಜನರ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net