

ಗುಂಡ್ಲುಪೇಟೆ: ಪೊಲೀಸ್ ಇಲಾಖೆಯ ತೆರೆದಮನೆ ಕಾರ್ಯಕ್ರಮದ ಅನ್ವಯ ಗುರುವಾರ ಸಂಜೆ ಪಟ್ಟಣದ ಪೊಲೀಸ್ ಠಾಣೆಗೆ ಶ್ರೀ ವಿನಾಯಕ ಕಾನ್ವೆಂಟಿನ ವಿದ್ಯಾರ್ಥಿಗಳನ್ನು ಕರೆತಂದು ಪೊಲೀಸ್ ಕಾರ್ಯವೈಖರಿ ಬಗ್ಗೆ ಅರಿವು ಮೂಡಿಸಲಾಯಿತು.
ಠಾಣೆಗೆ ಆಗಮಿಸಿದ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಲ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ, ಸಬ್‌ಇನ್ಸ್‌ಪೆಕ್ಟರ್ ಸಾಹೇಬಗೌಡ ಪೊಲೀಸ್ ಠಾಣೆಯ ಕಾರ್ಯವೈಖರಿಗಳ ಬಗ್ಗೆ ಪರಿಚಯ ಮಾಡಿಸಿ ವಿದ್ಯಾರ್ಥಿಗಳ ಅನುಮಾನಗಳಿಗೆ ಉತ್ತರ ನೀಡಿದರು.
ಪ್ರತಿ ಠಾಣೆಯಲ್ಲಿ ಎಷ್ಟು ಸಿಬ್ಬಂದಿ ಇರುತ್ತಾರೆ, ಯಾರು ಯಾರು ಯಾವ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ, ಸಂತ್ರಸ್ತರು ಪೊಲೀಸ್ ಠಾಣೆಗೆ ಆಗಮಿಸಿದರೆ ಅವರಿಂದ ದೂರು ಸ್ವೀಕರಿಸಿ ಪ್ರಕರಣ ದಾಖಲಿಸುವುದು, ಕಳ್ಳತನ ಮುಂತಾದ ಅಪರಾಧ ಚಟುವಟಿಕೆಗಳು ನಡೆದಾಗ ಪತ್ತೆಕಾರ್ಯ ಕೈಗೊಳ್ಳುವುದು, ಕಂಪ್ಯೂಟರ್ ಬಳಕೆ ಸೇರಿದಂತೆ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಸಂಚಾರ ನಿಯಮಗಳ ಪಾಲನೆಯಲ್ಲಿ ಪೊಲೀಸರ ಪಾತ್ರದ ಬಗ್ಗೆ ಮನವರಿಕೆ ಮಾಡಿದರು.
ಸಮಾಜದಲ್ಲಿ ಶಾಂತಿ ನೆಲೆಸಲು ಹಾಗೂ ಅಪರಾಧಿಗಳ ಪತ್ತೆಯಲ್ಲಿ ಸಾರ್ವಜನಿಕರ ಸಹಕಾರ ಮುಖ್ಯವಾದುದು, ದಿನೇ ದಿನೆ ಬೆಳೆಯುತ್ತಿರುವ ಪಟ್ಟಣದಲ್ಲಿ ಇತ್ತೀಚೆಗೆ ಅಪಘಾತಗಳು ಹೆಚ್ಚಾಗುತ್ತಿವೆ. ಸಂಚಾರ ನಿಯಮ ಪಾಲನೆಯಿಂದ ಜೀವಹಾನಿ ತಡೆಗಟ್ಟಬಹುದು. ವಿದ್ಯಾರ್ಥಿಗಳು ತಾವು ಕಾನೂನು ಪಾಲನೆ ಬಗ್ಗೆ ಹೆಚ್ಚಿನ ಅರಿವು ಹೊಂದುವುದರಿಂದ ಮುಂದಿನ ದಿನಗಳಲ್ಲಿ ಸಮಾಜವು ಶಾಂತಿ ಸುವ್ಯವಸ್ಥೆಯಿಂದ ಇರಲು ಸಾಧ್ಯವಾಗುತ್ತದೆ ಎಂದು ಮನವರಿಕೆ ಮಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು.